ರೂಮಿಯಿಂದ ಶಮ್ಸ್ ತಬ್ರೇಝರ ಮಡಿಲಿಗೆ

ಭಾಗ ಎರಡು

ರೂಮಿಯನ್ನು ಕಣ್ತುಂಬಿಕೊಂಡ ನಾವು ಶಮ್ಸ್ ತಬ್ರೇಝರನ್ನು ಅರಸುತ್ತಾ ಮುಂದೆ ನಡೆದೆವು.ವಾಸ್ತವದಲ್ಲಿ ನಾನು ಮೊದಲಾಗಿ ತಬ್ರೇಝರನ್ನು ಕೇಳಿದ್ದೇ ರೂಮಿಯೆಂಬ ಸೇತುವೆಯ ಮುಖಾಂತರವಾಗಿತ್ತು.ತುರ್ಕಿಗೆ ವೀಸಾ ಮಂಜೂರಾದ ಬಳಿಕ ವಿಲಿಯಂ ಚಿಟ್ಟಿಕ್ ಇಂಗ್ಲಿಷ್‌ಗೆ ಅನುವಾದಿಸಿದ ಶಮ್ಸ್ ತಬ್ರೇಝರ ಆತ್ಮಚರಿತ್ರೆ, ‘ಮಿ ಆಂಡ್ ರೂಮಿ’ ಕೃತಿಯನ್ನು ಕುತೂಹಲದಿಂದ ಓದಿ ಮುಗಿಸಿದ್ದೆ.
ಆ ಕೃತಿಯ ಮುನ್ನುಡಿಯಲ್ಲಿ ರೂಮಿ ಮತ್ತು ತಬ್ರೇಝರ ಒಡನಾಟದ ಬಗ್ಗೆ ಆನ್ ಮೇರಿ ಶಿಮ್ಮೆಲ್ ಬರೆದ ಒಂದಿಷ್ಟು ಸಾಲುಗಳು ರೂಮಿ ಮತ್ತು ತಬ್ರೇಝರ ನಡುವಿನ ಆತ್ಮಬಂಧವನ್ನು ಬಹಳಷ್ಟು ಸೊಗಸಾಗಿಯೇ ತೆರೆದಿಡುತ್ತಿದ್ದವು.

ತನ್ನ ಮೂವತ್ತೆಂಟನೆಯ ವಯಸ್ಸಿನಲ್ಲಾಗಿತ್ತು ರೂಮಿಯ ಬದುಕಿನಲ್ಲಿ ಶಮ್ಸ್ ಎಂಬ ನೇಸರನ ಉದಯವಾಗುವುದು.ಮುಂದಕ್ಕೆ ರೂಮಿಯ ಚಿಂತನೆಗಳಿಗೆ ರೆಕ್ಕೆಗಳು ಜೋಡಿಸಿಕೊಟ್ಟದ್ದು ಶಮ್ಸ್ ಎಂಬ ಆ ‘ನೂರ್’ ಆಗಿತ್ತೆಂಬುವುದು ಮತ್ತೊಂದು ವಿಶೇಷ.ಅವರ ಮೊದಲ ಭೇಟಿಯ ಕುರಿತಾದಂತೆ ಹಲವಾರು ಕಥೆಗಳು ಚಾಲ್ತಿಯಲ್ಲಿರುವುದು ಕಾಣಬಹುದು.ಒಮ್ಮೆ ರೂಮಿಯವರ ತರಗತಿಗೆ ಶಮ್ಸ್ ತಬ್ರೇಝರು ಒಬ್ಬ ದಾರಿಹೋಕನಂತೆ ಬರುತ್ತಾರೆ.ಸುತ್ತಲೂ ಜೋಡಿಸಿರುವ ಗ್ರಂಥಗಳತ್ತ ಬೊಟ್ಟುಮಾಡಿ ಈ ಪುಸ್ತಕಗಳಲ್ಲಿ ಏನಿದೆ ಎಂದು ರೂಮಿಯರ ಬಳಿ ಕೇಳಿದಾಗ,
ಅವೆಲ್ಲಾ ನಿಮಗೆ ಅರ್ಥವಾಗದು ಎಂದು ರೂಮಿ ಉತ್ತರಿಸುತ್ತಾರೆ.ಇದನ್ನು ಕೇಳಿದ ತಬ್ರೇಝರು ಆ ಗ್ರಂಥಗಳನ್ನೆಲ್ಲ ಹತ್ತಿರವಿದ್ದ ಕೊಳಕ್ಕೆ ಎತ್ತಿ ಎಸೆದುಬಿಡುತ್ತಾರೆ. ಅರೆಕ್ಷಣ ಎಲ್ಲವೂ ಸ್ತಬ್ಧವಾದಂತೆ…ಇದನ್ನು ಕಂಡ ರೂಮಿ ವಿಚಲಿತಗೊಳ್ಳುತ್ತಾರೆ .ಶಮ್ಸ್ ತಬ್ರೇಝರು ತಕ್ಷಣವೇ ಕೊಳದಲ್ಲಿದ್ದ ಅಷ್ಟೂ ಗ್ರಂಥಗಳನ್ನು ಎತ್ತಿ ರೂಮಿಯವರ ಕೈಗಿಡುತ್ತಾರೆ. ಆದರೆ ಏನಾಶ್ಚರ್ಯ!.ಒಂದೇ ಒಂದು ಪುಸ್ತಕವೂ ನೆನೆಯದೇ ಇರುವುದನ್ನು ಗಮನಿಸಿದ ರೂಮಿಯವರು ಕುತೂಹಲಭರಿತರಾಗಿ ಕೇಳುತ್ತಾರೆ. ಅರೆ…ಇದೆಲ್ಲ ಹೇಗೆ ಸಾಧ್ಯ,? ಇದರ ರಹಸ್ಯವಾದರೂ ಏನು?ತಬ್ರೇಝರು ತೆಳು ನಗೆಯೊಂದಿಗೆ ಹೀಗನ್ನುತ್ತಾರೆ ‘ ಅವೆಲ್ಲಾ ನಿಮಗೆ ಅರ್ಥವಾಗಲಾರದು’.!

ಈ ಘಟನೆಯ ಬಳಿಕ,ರೂಮಿ ಶಮ್ಸ್‌ರನ್ನು ಹುಡುಕುತ್ತಾ ಅಲೆದಾಡತೊಡಗಿದರು. ಸುಜ್ಞಾನದ ಸಾಗರವೇ ಆಗಿದ್ದ ಶಮ್ಸ್ ತಬ್ರೇಝರಿಂದ ಅರಿವಿನ ಅಮೃತವನ್ನು ಸಾಕಷ್ಟು ಎದೆಗಿಳಿಸಿಕೊಂಡರು. ಇದರೊಂದಿಗೆ ರೂಮಿಯ ಬದುಕಿನಲ್ಲಿ ಬದಲಾವಣೆಯ ಮಂದ ಮಾರುತವೊಂದು ಮೆಲ್ಲನೆ ಬೀಸತೊಡಗಿತು. ಆಧ್ಯಾತ್ಮಿಕತೆಯ ಬಗೆಗಿನ ತನ್ನ ಅರಿವು, ಜಿಜ್ಞಾಸೆ, ವಿಚಾರಗಳನ್ನು ರೂಮಿ, ಶಮ್ಸ್ ತಬ್ರೇಝರ ಸಮ್ಮುಖದಲ್ಲಿ ಹಂಚಿಕೊಂಡರು. ಅಲ್ಲೊಂದು ಶ್ರೇಷ್ಠ ಮಟ್ಟದ ವಿಚಾರ ಮಂಥನವೇ ನಡೆಯಿತು. ಇವುಗಳು ನಂತರ ಅದ್ಭುತ ಕಥೆಗಳಾದವು,ಎಂದಿಗೂ ಓದಿ ಮುಗಿಸಲಾಗದ ಕವನಗಳಾದವು.! ನಾನಾರ್ಥಗಳು ಸ್ಪುರಿಸುವ ಮಹಾ ಕಾವ್ಯಗಳಾದವು..! ಸುಮಾರು ಆರು ತಿಂಗಳುಗಳ ಕಾಲ ಇಬ್ಬರೂ ಅಗುಣಿಹಾಕಿದ ಕೋಣೆಯಲ್ಲಿ ತಪಸ್ಸಿಗೆ ಕುಳಿತವರಂತೆ ಆಧ್ಯಾತ್ಮಿಕತೆಯ ಬಗೆಗಿನ ಚರ್ವಿತ ಚರ್ವಣನದಲ್ಲಿ ತಲ್ಲೀನಗೊಂಡರು.

ಆ ಬಳಿಕ ಶಮ್ಸ್ ತಬ್ರೇಝರ ಅನಿರೀಕ್ಷಿತ ಅದೃಶ್ಯವಾಗುವಿಕೆ ರೂಮಿಯನ್ನು ಬಹಳವಾಗಿ ಕಾಡತೊಡಗಿತ್ತು. ಆ ಏಕಾಂತದ ಫಲವಾಗಿಯೇ ರೂಮಿ ‘ದಿವಾನೇ ಶಮ್ಸ್ ತಬ್ರೇಝ್’ ಎಂಬ ನಲವತ್ತು ಸಾವಿರ ಕವಿತೆಗಳುಳ್ಳ ಬೃಹತ್ ಕಾವ್ಯವನ್ನು ರಚಿಸಿದರು. “ಶಮ್ಸರ ನೆನಪಿನಲ್ಲಿ ನಾನು ಸುರಿಸಿದ ಕಂಬನಿಗಳು ಯಾವ ಸಾಗರದಲ್ಲಿ ಲೀನವಾದವೋ” ಎಂದು ರೂಮಿ ಒಬ್ಬ ಅಪ್ಪಟ ವಿರಹಿಯಂತೆ ಹಾಡುತ್ತಿದ್ದರು.

ತಬ್ರೇಝರ ಮಖ್‌ಬರದ ಕಡೆಗೆ ಚಲಿಸುತ್ತಿದ್ದ ನಾವು ಅಲ್ಲೊಂದು ಕಪ್ಪುಎಲೆಯಾಕಾರದ ಆಕೃತಿಯನ್ನು ನೋಡಿದೆವು.ಅದರ ಹಿಂಭಾಗದಲ್ಲಿ ಸಣ್ಣ ಬೋರ್ಡ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ. ಈ ಸ್ಥಳವನ್ನು ‘ಮಜ್ಮೌಲ್ ಬಹ್ರೇನ್’ ಅಥವಾ ‘ಎರಡು ಸಾಗರಗಳ ಸಮಾಗಮ’ ಎಂದು ಕರೆಯಲಾಗುತ್ತದೆ.1244 ರ ನವೆಂಬರ್ 30 ರಂದು ರೂಮಿ ಮತ್ತು ಶಮ್ಸ್ ತಬ್ರೇಝರು ಭೇಟಿಯಾದ ಸ್ಥಾನವಾಗಿದೆ .’ಇದು ಎರಡು ಮಹಾಸಾಗರಗಳ ಸಂಗಮ ಭೂಮಿಯಾಗಿದೆ’ ಎಂದು ಇಂಗ್ಲಿಷ್ ಮತ್ತು ಟರ್ಕಿಶ್ ಭಾಷೆಯಲ್ಲಿ ಬರೆದಿರುವುದನ್ನು ನೋಡಿದೆವು.ನಿಜಕ್ಕೂ ಆ ಸಂಗಮ ಭೂಮಿಯಲ್ಲಿ ಒಂದು ತೆರನಾದ ಆಧ್ಯಾತ್ಮಿಕ ಅನುಭೂತಿ ಅನುಭವೇದ್ಯವೂ ಹೌದು.

ನಾವು ‘ಮಜ್ಮೌಲ್ ಬಹ್ರೇನ್’ ಅನ್ನು ದಾಟಿ ಅಲ್ಲಿಯೇ ಅನತಿ ದೂರದಲ್ಲಿರುವ ಸಣ್ಣ ಪಾಕೆಟ್ ರಸ್ತೆಯೊಂದರಲ್ಲಿ ಮುಂದಕ್ಕೆ ಚಲಿಸಿದರೆ ಅಲ್ಲೊಂದು ಚಂದದ ವಿನ್ಯಾಸದ ಮಿನಾರ ದರ್ಶನವಾಗುತ್ತದೆ.ಮುಕುಟವಿಲ್ಲದ ಮಹಾರಾಜ,ಜ್ಞಾನ ಲೋಕದ ವಿದ್ವತ್‌ ಪ್ರತಿಭೆ ತಬ್ರೇಝರು ಚಿರ ವಿಶ್ರಾಂತಿ ಪಡೆಯುತ್ತಿರುವುದು ಅಲ್ಲಿಯೇ.ಶಮ್ಸ್ ಸಮಾಧಿಗೆ ಸಂಬಂಧಿಸಿದಂತೆ ಇತಿಹಾಸಕಾರರೆಡೆಯಲ್ಲಿ ಹತ್ತು ಹಲವು ಭಿನ್ನವಾದ ಅಭಿಪ್ರಾಯಗಳಿವೆ.
ಶಮ್ಸರ ಸಮಾಧಿ ಇರಾನ್‌ನಲ್ಲಿದೆಯೆಂದೂ,ಪಾಕಿಸ್ತಾನದಲ್ಲಿರುವ ಎರಡು ಸಮಾಧಿಗಳನ್ನು ಶಮ್ಸರದೆಂಬ ನಂಬಿಕೆಯಿಂದ ಜನರು ಸಂದರ್ಶಿಸುತ್ತರೆಂದೂ ಹೇಳಲಾಗುತ್ತದೆ.ಆದರೂ ಕೊನ್ಯಾದಲ್ಲಿನ ಶಮ್ಸ್ ತಬ್ರೇಝರ ಸಮಾಧಿ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿರುವುದಂತೂ ನಿಜ.ಈ ಮಕ್‌ಬರದಲ್ಲಿ ನಡೆಯುವ ಪ್ರಾರ್ಥನೆಯ ಮುಖಾಂತರವೇ ರೂಮಿಯ ಉರುಸ್ ಅಧಿಕೃತವಾಗಿ ಪ್ರಾರಂಭಗೊಳ್ಳುವುದೆಂಬ ಮಾಹಿತಿಯನ್ನು ಸ್ಥಳೀಯರು ನಮ್ಮೊಂದಿಗೆ ಹಂಚಿಕೊಂಡರು.

ಕೊನ್ಯಾದ ಆಧ್ಯಾತ್ಮಿಕ ಪರಂಪರೆ ರೂಮಿಗೆ ಮಾತ್ರ ಸೀಮಿತವಾಗಿಲ್ಲ.ತತ್ವಜ್ಞಾನಿ ಮತ್ತು ಇಬ್ನ್ ಅರಬಿ ಚಿಂತನೆಯ ವಕ್ತಾರ ‘ಸದ್ರುದ್ದೀನ್ ಕೂನವಿ’ ಕೊನ್ಯಾ ಮೂಲದವರು.ರೂಮಿ ತನ್ನ ಮೇಲಿನ ಮಯ್ಯತ್ ನಮಾಝ್ (ಅಂತ್ಯಕ್ರಿಯೆಯ ಪ್ರಾರ್ಥನೆ)ಮುನ್ನಡೆಸುವಂತೆ ಸದ್ರುದ್ದೀನ್ ಕೂನವಿಯವರಲ್ಲಿ ವಿನಂತಿಸಿಕೊಂಡಿದ್ದರಂತೆ.

ನಾವು ಶಮ್ಸ್ ತಬ್ರೇಝರ ಸಮಾಧಿಯನ್ನು ದಾಟಿ ಸಿರಿಯನ್ ನಿರಾಶ್ರಿತರ ಕಾಲೋನಿಗಳ ಮೂಲಕ ನಡೆಯತೊಡಗಿದೆವು.ಉರ್ದುಗನ್ ಒಬ್ಬ ಜಾಗತಿಕ ಮುಸ್ಲಿಮರ ನಾಯಕ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕಾಲೋನಿಗಳ ಮೂಲಕ ಒಂದಿಷ್ಟು ನಡೆದರೆ ಸಾಕಾಗಬಹುದೇನೋ.ಸಿರಿಯನ್ ನಿರಾಶ್ರಿತರಿಗೆ ಸುಂದರವಾದ ಸುಮಾರು ಮೈಲುಗಳಷ್ಟು ದೂರದ ವಿಶಾಲ ಪ್ರದೇಶಗಳನ್ನು ನಿಗದಿಪಡಿಸಿ ನೀಡಲಾಗಿತ್ತು.ಅವರುಗಳು ಅಲ್ಲಿ ಮತ್ತೆ ಬದುಕು ಕಟ್ಟಿಕೊಂಡು ನಿರಾಳರಾಗಿರುವುದನ್ನು ನಾವಲ್ಲಿ ಕಂಡೆವು.

ಹೃದಯಗಳ ನಗರ ಎಂದೇ ಕರೆಯಲ್ಪಡುವ ಕೊನ್ಯಾದ ಆ ಬೀದಿಗಳಲ್ಲಿ,ಅರೇಬಿಯನ್ ಹೋಟೆಲ್‌ಗಳು,ಅರೇಬಿಯನ್ ದೇಶಗಳಲ್ಲಿ ಕಾಣಸಿಗುವ ಪೀಠೋಪಕರಣಗಳು,ಆಟಿಕೆಗಳು ಮತ್ತು ಬಟ್ಟೆಗಳನ್ನು ಹರವಿಕೊಂಡು ಕುಳಿತುಕೊಂಡಿರುವ ವ್ಯಾಪಾರಿಗಳು ಅಲ್ಲಿದ್ದರು.

ಒಡಲ ತುಂಬೆಲ್ಲಾ ಒಲುಮೆ ತುಂಬಿಕೊಂಡಿರುವ,ಪ್ರೀತಿಸಲು ಮಾತ್ರವೇ ಗೊತ್ತಿರುವ ಕೋನ್ಯಾದ ಜನತೆಗೆ ಸಿರಿಯನ್ ನಿರಾಶ್ರಿತರ ಬಗ್ಗೆ ತಮ್ಮದೇ ತಕರಾರುಗಳಿವೆ.ಸಿರಿಯನ್ ಜನರ ವಲಸೆಯ ಬಳಿಕವಷ್ಟೇ ಕೋನ್ಯಾದಲ್ಲಿ ಕಳ್ಳತನ,ದರೋಡೆ,ಕಗ್ಗೊಲೆಗಳು ಹುಟ್ಟಿಕೊಂಡವೆನ್ನುವ ಹಲವರನ್ನು ನಾವಲ್ಲಿ ಮಾತನಾಡಿಸಿದೆವು.ಶಾಂತವಾಗಿದ್ದ ಊರಿನಲ್ಲಿ ಭೀತಿಯ ವಾತಾವರಣ ಹುಟ್ಟಿಸಿದ ಬಗೆಗೆ ಅಸಮಾಧಾನ ಇರುವುದು ಅವರ ಮಾತಿನಲ್ಲಿ ಡಾಳಾಗಿ ಕಾಣುತ್ತಿದ್ದವು.

ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಮೈಯೊಡ್ಡಿ ಜೊತೆಗೆ ಮಳೆರಾಯನ ಮಿದುವಾದ ಸುಖಸ್ಪರ್ಶವನ್ನು ಎದೆಗಿಳಿಸಿಕೊಂಡ ನಾವು ವಿಶ್ರಾಂತಿಗೆಂದು ಕೋಣೆಯ ಕಡೆಗೆ ನಡೆದೆವು.ನನ್ನ ಮನಸ್ಸಿಡೀ ಶನಿವಾರ ಪ್ರದರ್ಶನಗೊಳ್ಳಲಿರುವ ‘ಸೆಮಾ’ ನೃತ್ಯದ ಬಗೆಗಿನ ಕಲ್ಪನಾ ಲೋಕದಲ್ಲಿಯೇ ತೇಲಾಡುತ್ತಿತ್ತು.ಸೆಮಾ ನೃತ್ಯ ನಡೆಯುವ ಆ ಎರಡು ದಿನಗಳೆಂದರೆ ರೂಮಿ ಮತ್ತು ತಬ್ರೇಝರ ಅಧಮ್ಯ ಪ್ರೇಮಿಗಳಿಗೆ ಹಬ್ಬದ ದಿನವಿದ್ದಂತೆ.ಒಬ್ಬೊಬ್ಬರ ಎದೆಬಡಿತವೂ ಮತ್ತೊಬ್ಬನಿಗೆ ಅನುಭವಿಸಲಾಗುವ ಆಶಿಕುಗಳು ಒಂದೆಡೆ ಸೇರುವುದೆಂದರೆ ಅದೊಂದು ಹಬ್ಬವಾಗದೆ ಇರುವುದಾದರೂ ಹೇಗೆ…!

ಮರುದಿನ ಸೆಮಾ ನೃತ್ಯವನ್ನು ವೀಕ್ಷಿಸಲೆಂದು ಹೋದೆವು. ಈ ಸೆಮಾ ನೃತ್ಯವೂ ಸೂಫಿ ಪರಂಪರೆಯ ಮುಖ ಮುದ್ರೆಯಂತೆ ಜನಜನಿತವಾಗಿದೆ.ಇದು ಹುಟ್ಟಿಕೊಂಡ ಬಗೆಗೆ ಭಿನ್ನ ಕಥೆಗಳಿವೆ.
ಒಂದು ದಿನ ಮುಂಜಾನೆ ರೂಮಿ ನಗರವೊಂದರ ಮೂಲಕ ಸಾಗುವಾಗ ಅಕ್ಕಸಾಲಿಗನಾದ ಸದ್ರುದ್ದೀನ್ ಕೂನವಿಯ ಸುತ್ತಿಗೆಯ ಲಯಬದ್ಧವಾದ ಬಡಿತದ ಸದ್ದು ಕಿವಿಗೆ ಬಿಳುತ್ತದೆ.ಆ ಬಡಿತದ ಸದ್ದು ‘ಅಲ್ಲಾಹ್ ಅಲ್ಲಾಹ್’ ಎಂಬ ದ್ಸಿಕ್ರ್ ಸ್ತುತಿಯಂತೆ ಕೇಳಿಬರುತ್ತದೆ.ಆನಂದಮತ್ತನಾದ ರೂಮಿ ತನ್ನೆರಡೂ ತೋಳುಗಳನ್ನು ಚಾಚಿ ವೃತ್ತಾಕಾರವಾಗಿ ತಿರುಗಲಾರಂಭಿಸುತ್ತಾರೆ‌.ಹೀಗೆ ಸೆಮಾ ನೃತ್ಯ ಹುಟ್ಟಿಕೊಂಡಿತು ಎನ್ನಲಾಗುತ್ತದೆ.ಮೌಲಾನರ ತ್ವರೀಕತಿನ ಮುರೀದರು(ಹಿಂಬಾಲಕರು) ಈಗಲೂ ಸೆಮಾ ನೃತ್ಯವನ್ನು ಪರಿಶೀಲಿಸುವುದು, ಸೆಮಾ ಪ್ರದರ್ಶನಗಳನ್ನು ಆಯೋಜಿಸುವುದು ಕಾಣಬಹುದು.

ತುರ್ಕಿಯಲ್ಲಿ ಅತ್ತಾತುರ್ಕ್ ಆಳ್ವಿಕೆಯ ಅವಧಿಯಲ್ಲಿ ಸೆಮಾ ಪ್ರದರ್ಶನವನ್ನು ನಿಷೇದಿಸಲ್ಪಟ್ಟಿದ್ದರೂ ತದನಂತರ ಮೌಲಾನರ ಅನುಯಾಯಿಗಳು ಮತ್ತೆ ಸೆಮಾ ನೃತ್ಯವನ್ನು ಚಾಲ್ತಿಯಲ್ಲಿರುವಂತೆ ನೋಡಿಕೊಂಡು ಆ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಸೆಮಾ ನೃತ್ಯವು ಅಲ್ಲಿರುವ ಹಿರಿಯ ಶೈಖರೋರ್ವರ ಮುಂದಾಳತ್ವದಲ್ಲಿ ನಡೆಯುತ್ತದೆ.ಆ ಶೈಖರ ಸನ್ನಿಧಿಯಲ್ಲಿ ದರ್ವೇಶುಗಳು ಸಾಲಾಗಿ ಬಂದು ನಮಿಸಿ ಆಶಿರ್ವಾದವನ್ನು ಪಡೆಯುತ್ತಾರೆ.ಬಳಿಕ ಅಧಿಕೃತವಾಗಿ ನೃತ್ಯವು ಪ್ರಾರಂಭಗೊಳ್ಳುತ್ತದೆ‌.ಒಂದು ಕೈಯನ್ನು ಆಕಾಶಕೆತ್ತಿಯೂ ಮತ್ತೊಂದು ಕೈಯನ್ನು ಭೂಮಿಯೆಡೆಗೆ ತೋರುತ್ತಾ ವರ್ತುಲಾಕಾರವಾಗಿ ಸುತ್ತು ಹಾಕುತ್ತಾ ಚಲಿಸಲಾಗುತ್ತದೆ.ಇದರ ಒಂದೊಂದು ಚಲನೆಗಳಿಗೂ ಹಲವಾರು ಒಳಾರ್ಥಗಳಿವೆ.ದರ್ವೇಶರು ಧರಿಸುವ ಆ ಉಡುಪುಗಳ ಕುರಿತೇ ಹಲವಾರು ಕೃತಿಗಳಿದೆಯೆಂಬುದು ಈ ನೃತ್ಯದ ಆಳ ಅಗಲವನ್ನು ಪ್ರತಿಬಿಂಬಿಸುತ್ತದೆ.

ಆ ದಿನ ಎಲ್ಲವೂ ಮುಗಿಸಿದ ಬಳಿಕ ನಮ್ಮ ವಿಶ್ರಾಂತಿ ಕೋಣೆಗೆ ತಲುಪಿದೆವು.ಆಕಾಂಕ್ಷೆಯಿಂದ ವೀಕ್ಷಿಸಿದ ಸೆಮಾ ನೃತ್ಯದ ಬಗೆಗೆ ಕೋನ್ಯಾದ ಜನರೆಡೆಯಲ್ಲಿಯೇ ಹಲವಾರು ಅಭಿಪ್ರಾಯಗಳಿರುವುದು ನಮ್ಮ ಗಮನಕ್ಕೆ ಅದಾಗಲೇ ಬಂದಿತ್ತು‌.ಆ ಕುರಿತು ಒಂದಿಷ್ಟು ಮಾತನಾಡುತ್ತಾ ನಿದ್ರೆಗೆ ಜಾರಿದೆವು.ಒಂದು ಅವಿಸ್ಮರಣೀಯ ಘಳಿಗೆಯಾಗಿ,ಮರೆಯಲಾಗದ ದಿನವಾಗಿ ನನ್ನ ಬದುಕಿನಲ್ಲಿ ಆ ದಿನ ಅಚ್ಚಳಿಯದೆ ಉಳಿದುಬಿಟ್ಟಿತು.

ನಾಳೆ ಹೊರಡಬೇಕಿರುವ ಖೋಜಾರ ನಗರಕ್ಕೆ ಬಸ್ ಟಿಕೆಟ್ ಬುಕ್ ಮಾಡುವ ಕೆಲಸವೂ ಆ ಮೊದಲೇ ಶ್ರದ್ಧೆಯಿಂದ ಗೆಳೆಯರು ಮಾಡಿದ್ದರು.ಇನ್ನು ನಾಳೆ ಖೋಜಾರ ದರ್ಬಾರಿನತ್ತ ಪಯಣ…

ಮೂಲ : ಫಾಝಿಲ್ ಫಿರೋಝ್
ಅನು : ಝುಬೈರ್ ಹಿಮಮಿ ಪರಪ್ಪು

Leave a Reply

*