ಶ್ರೇಷ್ಠ ಸೂಫಿ ದಾರ್ಶನಿಕ ಇಬ್ನು ಅರಬಿ ರವರ ಫುಸೂಸುಲ್ ಹಿಕಮ್ ನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಕುರಿತು ಬರೆದ ಅಧ್ಯಾಯವೊಂದರ ಮೇಲೆ ದಾವೂದ್ ಅಲ್ ಖೈಸರಿ ನೀಡಿದ ವ್ಯಾಖ್ಯಾನದ ಆಧಾರದಲ್ಲಿ ಪ್ರಸ್ತುತ ಪ್ರಬಂಧ ಬರೆಯಲಾಗಿದೆ.ವಿಶ್ವವಿಜ್ಞಾನದಲ್ಲಿ ಮುಹಮ್ಮದೀ ಮೂಲ ಸ್ವರೂಪವೆಂಬ ತತ್ವ ಮೀಮಾಂಸಕ ಪರಿಕಲ್ಪನೆಯ ಮಹತ್ವವನ್ನಾಗಿದೆ ವ್ಯಾಖ್ಯಾನಕಾರರು ಚರ್ಚೆ ಮಾಡಿರುವುದು. ಪ್ರವಾದಿ (ಸ) ಅಸ್ತಿತ್ವದಲ್ಲಿ ಅತ್ಯಂತ ಪರಿಪೂರ್ಣ ವ್ಯಕ್ತಿಯೆಂಬ ನಿಟ್ಟಿನಲ್ಲಿ ಏಕತ್ವದ ಚೈತನ್ಯ ಹೊಂದಿದ್ದಾರೆ ಎಂಬ ವಿವರಣೆಯೊಂದಿಗೆ ಇಬ್ನು ಅರಬಿ ತನ್ನ ಅಧ್ಯಾಯವನ್ನು ಆರಂಭಿಸಿದ್ದಾರೆ. ಸೃಷ್ಠಿ ಕ್ರಿಯೆಯ ಆರಂಭ ಮತ್ತು ಕೊನೆ ಎರಡೂ ಪ್ರವಾದಿವರ್ಯರ ಮೂಲಕವೇ ಆಗಿದೆ. ಆದಂ (ಅ) ಮಣ್ಣು ಮತ್ತು ನೀರಿನ ನಡುವಿನ ಅವಸ್ಥೆಯಲ್ಲಿದ್ದಾಗಲೆ ನಾನು ಪ್ರವಾದಿಯಾಗಿದ್ದೆ ಎಂಬ ಹದೀಸ್ ಇಲ್ಲಿ ಸ್ಮರಣೀಯವಾಗಿದೆ.
“ಇಡೀ ಮನುಷ್ಯ ಸಂಕುಲದ ಪೈಕಿ ಅತ್ಯಂತ ಪರಿಪೂರ್ಣತೆ ಹೊಂದಿರುವ ಅಸ್ತಿತ್ವವಾಗಿರುವುದರಿಂದ ಪ್ರವಾದಿ (ಸ) ಏಕತ್ವದ ಅನುಪಮ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಸೃಷ್ಟಿ ಪ್ರಕ್ರಿಯೆ ಅವರಿಂದಲೇ ಆರಂಭವಾಗುತ್ತದೆ ಹಾಗೂ ಅವರಲ್ಲೇ ಕೊನೆಗೊಳ್ಳುತ್ತದೆ. ಕಾರಣ, ಆದಮ್ (ಅ) ಮಣ್ಣು ಮತ್ತು ನೀರಿನ ನಡುವಣ ಸ್ಥಿತಿಯಲ್ಲಿದ್ದಾಗಲೇ ಪುಣ್ಯರು ಪ್ರವಾದಿಯಾಗಿದ್ದರು. ತರುವಾಯ ಭೌತಲೋಕಕ್ಕಿಳಿದಾಗ ಪ್ರವಾದಿ ಸರಣಿಯ ಮುದ್ರೆಯಾಗಿ ಆಗತರಾದರು.”
ಖೈಸರಿಯವರ ವ್ಯಾಖ್ಯಾನ ಇಲ್ಲಿ ಮುಖ್ಯವಾಗುತ್ತದೆ. ಏಕತ್ವದ ಅನುಪಮ ಪದವಿಯನ್ನು ನೆಬಿಯವರು ಪಡೆಯಲು ಕಾರಣವೇನೆಂಬ ಕುತೂಹಲ ತಣಿಸಲು ವಿವರಣೆಯೊಂದನ್ನು ನೀಡುತ್ತಾರೆ:
” ‘ದೈವಿಕ ಸಮಗ್ರತೆ’ (ಅಲ್ ಜಾಮಿಇಯ್ಯ ಇಲಾಹಿಯ್ಯ) ಎಂಬ ಆಧ್ಯಾತ್ಮಿಕ ಸ್ಥಾನಕ್ಕೆ ಪ್ರವೇಶ ಸಿಕ್ಕ ಏಕಮಾತ್ರ ವ್ಯಕ್ತಿ ಪ್ರವಾದಿ ಯಾಗಿರುವುದರಿಂದಲೇ ಅವರಿಗೆ ಅನನ್ಯ ಏಕತ್ವದ ಗುಣ ದೊರಕಿದೆ. ಪ್ರಸ್ತುತ ಸ್ಥಾನದ ಮೇಲೆ ‘ಅದ್ಸಾತುಲ್ ಅಹದಿಯ್ಯ’ ಎಂಬ ದರ್ಜೆ ಮಾತ್ರ ಉಳಿದಿರುವುದು. ಅಲ್ಲಾಹನ ಗುಣ ಮತ್ತು ನಾಮಗಳ ಪೈಕಿ ಅತ್ಯಂತ ಶ್ರೇಷ್ಠ ಹಾಗೂ ಸಮಗ್ರತೆ ಹೊಂದಿರುವ ‘ಅಲ್ಲಾಹ್’ ಎಂಬ ನಾಮವು ಅಭಿವ್ಯಕ್ತಗೊಳ್ಳುವ ಕೇಂದ್ರವಾಗಿದೆ ‘ದೈವಿಕ ಸಮಗ್ರತೆ’ ಎಂಬ ಪದವಿ “
ದೇವರ ಸರ್ವ ನಾಮಗಳನ್ನು ಒಗ್ಗೂಡಿಸುವ ಅಲ್ಲಾಹ್ ಎಂಬ ನಾಮವನ್ನು ಪ್ರವಾದಿ (ಸ) ಸ್ವೀಕರಿಸುವ ಕಾರಣದಿಂದಾಗಿಯೇ, “ದೈವಿಕ ಸಮಗ್ರತೆ” ಎಂಬ ಪದವಿಯಲ್ಲಿ ಪ್ರವಾದಿ (ಸ) ದೇವರ ಸರ್ವ ನಾಮಗಳನ್ನು ಸ್ವೀಕರಿಸುವ ಬಟ್ಟಲಾಗಿ ನೆಲೆನಿಲ್ಲುತ್ತಾರೆ. ಹಾಗೆ, ಏಕತ್ವದ ಗುಣ ಹೊಂದಿದ ಏಕಮಾತ್ರ ಸೃಷ್ಟಿಯಾಗಿ ಪರಿಗಣಿಸಲ್ಪಡುತ್ತಾರೆ. ಕಾರಣ, ಅಲ್ಲಾಹ್ ಎಂಬ ನಾಮವನ್ನು – ಇದು ಸರ್ವ ಸಮಗ್ರವಾದ ನಾಮ ಹಾಗೂ ಅನನ್ಯ ನಾಮವೂ ಕೂಡ (ಅಲ್ ಇಸ್ಮುಲ್ ಮುಫ್ರದ್) – ಸಮರ್ಪಕವಾಗಿ ಮೂರ್ತೀಕರಿಸಿದ, ಅಭಿವ್ಯಕ್ತಗೊಳಿಸಿದ ಸಾಟಿಯಿಲ್ಲದ ಸೃಷ್ಟಿಯಾಗಿದ್ದಾರೆ. ಜಗತ್ತಿನಲ್ಲಿರುವ ಅಸ್ತಿತ್ವಗಳೆಲ್ಲ ಉಂಟಾದದ್ದು ದೇವರ ಸ್ವಯಂ ಅಭಿವ್ಯಕ್ತಿಗಳ ಮೂಲಕ. ಅಂದರೆ, ದೇವರ ಗುಣ ನಾಮಗಳ ಪ್ರಕಟ ರೂಪವಾಗಿದೆ ಸೃಷ್ಟಿ ಪ್ರಪಂಚ. ಈ ಸೃಷ್ಟಿ ಪ್ರಪಂಚದಲ್ಲಿ ಪ್ರವಾದಿವರ್ಯರ ಸ್ಥಾನ ಅತ್ಯಂತ ಉನ್ನತ ಮಟ್ಟದಲ್ಲಾಗಿದೆ. ಆದ್ದರಿಂದ, ದೇವರ ಸ್ವಾಭಿವ್ಯಕ್ತಗಳ ಶ್ರೇಣಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದರಿಂದ ಅವರಲ್ಲಿ ಅಲ್ಲಾಹನ ಸರ್ವ ಗುಣ ನಾಮಗಳು ಪ್ರಕಟಗೊಂಡಿದೆಯೆಂದು ಮನಗಾಣಬಹುದು. ಇಬ್ನು ಅರಬಿಯವರ ಪ್ರಸ್ತುತ ವಿವರಣೆಯನ್ನು ಸ್ಪಷ್ಟಪಡಿಸಲು ಖೈಸರಿಯವರು “ ಮೊಟ್ಟ ಮೊದಲು ಅಲ್ಲಾಹು ಸೃಷ್ಟಿಸಿದ್ದು ನನ್ನ ಪ್ರಕಾಶವಾಗಿದೆ “ ಎಂಬ ಪ್ರಸಿದ್ದ ಹದೀಸನ್ನು ತರುತ್ತಾರೆ:
“ ವಸ್ತುಗಳ ಪೈಕಿ ಮೊಟ್ಟ ಮೊದಲಾಗಿ ಅಲ್ಲಾಹನ ಪವಿತ್ರ ಪ್ರಸರಣದಿಂದ ಹೊರಬಂದದ್ದು ಪ್ರವಾದಿವರ್ಯರ ಮೂಲಸ್ವರೂಪವಾಗಿದೆ. “ ಅಲ್ಲಾಹು ಸೃಷ್ಟಿಸಿದ ಮೊದಲ ವಸ್ತು ನನ್ನ ಪ್ರಕಾಶವಾಗಿತ್ತು “ ಎಂಬ ಹದೀಸ್ ಇದರೆಡೆಗೇ ಬೊಟ್ಟು ಮಾಡುತ್ತದೆ.”
ಪ್ರಸ್ತುತ ಪ್ರಕಾಶವನ್ನೇ ಆಗಿದೆ, ಇಬ್ನು ಅರಬಿ ಸೇರಿದಂತೆ ಸೂಫಿಗಳಾದಿ “ ಮುಹಮ್ಮದೀ ಮೂಲಸ್ವರೂಪ (ಹಕೀಕತ್ ಮುಹಮ್ಮದಿಯ್ಯ)” ಎಂದು ಕರೆದಿರುವುದು. ಅಲ್ಲಾಹನ ಸಕಲ ಅಭಿವ್ಯಕ್ತಿಗಳ ಕೇಂದ್ರವಾಗಿದೆ ಇದು. ಸೃಷ್ಟಿ ಪ್ರಪಂಚದ ಆರಂಭವೂ ಕೊನೆಯೂ ಇಲ್ಲೇ ಆಗಿದೆ. ಖೈಸರಿ ಪ್ರಕಾರ, ನೂರ್ ಮುಹಮ್ಮದೀ ಅನ್ನು “ ಪ್ರಥಮ ವಿವೇಕ “ (ಅಲ್ ಅಖ್ಲ್ ಅವ್ವಲ್) ಎಂದೂ ಸಂಬೋಧಿಸಲಾಗಿದೆ. ಇಬ್ನು ಅರಬಿ ಮತ್ತು ಪೂರ್ವ ವಿದ್ವಾಂಸನೇಕರು ಮುಹಮ್ಮದೀ ಮೂಲಸ್ವರೂಪವನ್ನು “ ಪ್ರಥಮ ವಿವೇಕ “ ( First Intellect) ದೊಂದಿಗೆ ಸಮೀಕರಿಸಿದ್ದು ಬಹಳ ಕುತೂಹಲಕಾರಿಯಾಗಿದೆ. ಕಾರಣ, ಪುರಾತನ ಗ್ರೀಕ್ ಹಾಗೂ ನಿಯೋಪ್ಲಾಟೋನಿಕ್ ಮುಸ್ಲಿಂ ತತ್ವಜ್ಞಾನ ಪರಂಪರೆಯಲ್ಲಿ ಢಾಳಾಗಿ ಚರ್ಚೆಗೀಡಾದ ಪರಿಭಾವನೆಯಾಗಿದೆ ಪ್ರಥಮ ವಿವೇಕ ಎಂಬುವುದು. ಫಾರಾಬಿ ಮತ್ತು ಇಬ್ನುಸೀನ ಮುಂತಾದ ಗ್ರೀಕ್ ಪ್ರಭಾವಿತ ಮುಸ್ಲಿಂ ತತ್ವಜ್ಞರ ವಿಶ್ಲೇಷಣೆ ಪ್ರಕಾರ, ದೈವೇಚ್ಛೆಯಿಂದ ಪ್ರಪ್ರಥವಾಗಿ ಅಸ್ತಿತ್ವಕ್ಕೆ ಬಂದ ವಸ್ತುವಾಗಿದೆ ಪ್ರಥಮ ವಿವೇಕ ಎಂಬುದು. ಆ ಮೂಲಕ ಬಹುತ್ವದ ಲೋಕ ಇರವನ್ನು ಪಡೆಯಲು ಅನುವು ಮಾಡಿಕೊಡಲಾಯಿತು. ಖೈಸರಿ ಪ್ರಸ್ತುತ ನಿಯೋಪ್ಲಾಟೋನಿಕ್ ವಿಚಾರಗಳನ್ನು ಪೂರ್ತಿಯಾಗಿ ಒಪ್ಪದಿದ್ದರೂ, “ಪ್ರಥಮ ವಿವೇಕ” ಪ್ರವಾದಿಯಲ್ಲದೆ ಬೇರೇನೂ ಅಲ್ಲ ಎಂಬ ನಿಲುವಲ್ಲಿ ದೃಢರಾಗಿದ್ದಾರೆ.
ಇಸ್ಲಾಮೀ ಆಧ್ಯಾತ್ಮ ತತ್ವಗಳ ಪೈಕಿ ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಮುಹಮ್ಮದೀ ಮೂಲಸ್ವರೂಪ (ಹಕೀಕತ್ ಮುಹಮ್ಮದಿಯ್ಯ) ಎನ್ನುವುದು. ಮೊಟ್ಟ ಮೊದಲು ಸೃಷ್ಟಿಯಾದದ್ದು ನೆಬಿಯವರ ಬೆಳಕಾಗಿತ್ತು ಎಂಬುವುದು ಇದರ ತಾತ್ಪರ್ಯ. ಖುರಾನ್ ಮತ್ತು ಹದೀಸುಗಳ ಆಧಾರದಲ್ಲಿ ಸೂಫಿಗಳು ಪ್ರಸ್ತುತ ಪರಿಕಲ್ಪನೆಯನ್ನು ಬೆಳೆಸಿದ್ದಾರೆ. ಅಲ್ಲಾಹನು ಖುರಾನಿನಲ್ಲಿ ಹಲವು ಕಡೆ ಪ್ರವಾದಿ (ಸ) ರನ್ನು ಬೆಳಕು ಎಂಬುದಾಗಿ ಸಂಬೋಧಿಸಿದ್ದಾನೆ. ಹಾಗೂ “ ಸರ್ವ ಲೋಕಕ್ಕೂ ಕರುಣಾಮಯಿಯಾಗಿ ತಮ್ಮನ್ನು ನೇಮಕಗೊಳಿಸಲಾಗಿದೆ” ಎನ್ನುವ ಪ್ರಸಿದ್ದ ಸೂಕ್ತವೂ ಕೂಡ ಪ್ರಸ್ತುತ ಸಿದ್ದಾಂತಕ್ಕೆ ಪುಷ್ಟಿ ನೀಡುತ್ತದೆ. ಕಾರಣ, ಪ್ರಪಂಚದ ಪ್ರತಿಯೊಂದು ವಸ್ತುವಿಗೂ ನೆಬಿ (ಸ) ಅನುಗ್ರಹ ದಾಯಕರು ಎನ್ನಲಾಗಿದೆ. ಯಾವುದೇ ವಸ್ತುವಿಗೆ ಮೊಟ್ಟ ಮೊದಲು ಸಿಗುವ ಅನುಗ್ರಹ ಅದರ ಅಸ್ತಿತ್ವವೇ ಆಗಿದೆ. ಹಾಗಿರುವಾಗ ಪ್ರತಿಯೊಂದರ ಅಸ್ತಿತ್ವದ ಪೂರ್ವದಲ್ಲಿ ಪ್ರಸ್ತುತ ಅನುಗ್ರಹ ನೀಡುವ ನೆಬಿ (ಸ) ಅಸ್ತಿತ್ವದಲ್ಲಿರಬೇಕು. ಆದ್ದರಿಂದ ಎಲ್ಲಕ್ಕಿಂತ ಮುನ್ನ ಅವರು ಇರಬೇಕು. ಇದನ್ನೇ ನೂರ್ ಮುಹಮ್ಮದೀ ಅಂತ ಕರೆದಿರುವುದು.
ಇಲ್ಲಿ ಗಮನೀಯ ಅಂಶವೇನೆಂದರೆ, ನೂರ್ ಮುಹಮ್ಮದಿಯ್ಯದಲ್ಲಿರುವ ನೂರ್ ಎಂಬುವುದು ನೆಬಿಯವರ ಹಕೀಕತಿಗೆ ಇರುವ ನಾಮವಾಗಿದೆಯೇ ಹೊರತು ಸಾಮಾನ್ಯ ನಾವು ಅರ್ಥೈಸುವ ಬೆಳಕು ಎಂಬ ಅರ್ಥವನ್ನು ಹೊಂದಿಲ್ಲ. ಹಕೀಕತ್ ಮುಹಮ್ಮದಿಯ್ಯಗೆ “ಬೆಳಕು” ಎಂಬ ಹೆಸರು ಸಿಗಲು ಕಾರಣ, ಎಲ್ಲ ವಸ್ತುಗಳು ಇರದಿರುವಿಕೆಯೆಂಬ ಕತ್ತಲಿನಿಂದ ಇರವು ಎಂಬ ಬೆಳಕಿಗೆ ಬರುವುದು ಮುಹಮ್ಮದೀ ನೈಜಸ್ವರೂಪದ ಮೂಲಕ. ಅಲ್ಲಾಹನ ದ್ಸಾತ್(ಸತ್ತು ಅಥವ ಅಸ್ತಿತ್ವದ ಯಥಾರ್ಥತೆ) ಅರಿಯುವುದು ಹೇಗೆ ಅಸಾಧ್ಯವೋ ಹಾಗೇ ನೆಬಿಯವರ ಮೂಲಸ್ವರೂಪವನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ನಮ್ಮ ಸಾಮರ್ಥ್ಯಕ್ಕೆ ನಿಲುಕದಂತದ್ದು. ಎಂದಲೇ ಇದನ್ನು ಸೂಫಿಗಳು ಅತೀಂದ್ರಿಯ ಲೋಕದ ಅತ್ಯಂತ ನಿಗೂಢ ವಿಚಾರವೆಂದು ಬಣ್ಣಿಸಿದ್ದಾರೆ. ಆದರೆ, ಅದರ ಕೆಲವೊಂದು ಗುಣಲಕ್ಷಣಗಳ ಕುರಿತು ವಿಶದವಾಗಿ ಮಾತನಾಡಿದ್ದಾರೆ.
ಮುಖ್ಯವಾಗಿ, ನೂರ್ ಮುಹಮ್ಮದೀ ಪ್ರಪಂಚದ ಎಲ್ಲ ವಸ್ತುಗಳ ಮೂಲಸತ್ವವಾಗಿದೆ. ಗ್ರೀಕ್ ದಾರ್ಶನಿಕ ಅರಿಸ್ಟಾಟಲನ ತತ್ವ ಮೀಮಾಂಸೆಯಲ್ಲಿ ಬರುವ ಹೈಲ್ (ಹಯೂಲ ಎಂದು ಅರಬಿಕ್ ರೂಪಾಂತರ) ಪರಿಕಲ್ಪನೆಯೊಂದಿದೆ. ವಸ್ತುಗಳೆಲ್ಲ ಮೂಲದ್ರವ್ಯ ಮತ್ತು ರೂಪಗಳ ಸಂಯೋಜನೆಯೆಂದೂ ಹಾಗೂ ಹೈಲ್ ಎಂದು ಹೆಸರಿಸಲಾದ ಮೂಲದ್ರವ್ಯವು ಎಲ್ಲದರಲ್ಲಿ ಸಮಾನವಾಗಿರುತ್ತದೆಯೆಂಬುದು ಆತನ ಸಿದ್ದಾಂತ. ಇದರ ಪ್ರಕಾರ ಎಲ್ಲ ವಸ್ತುಗಳ ಮೂಲ ಸತ್ವವೊಂದೇ.ರೂಪಗಳನ್ನು ಪಡೆಯುವಾಗ ಅವು ಭಿನ್ನವಾಗುತ್ತದೆ. ಪ್ರಸ್ತುತ ವಿಚಾರವನ್ನು ಸುಸಮಂಜಸವಾಗಿ ಸೂಫಿಗಳು ತಮ್ಮ ಮೆಟಾಫಿಸಿಕ್ಸ್ನಲ್ಲಿ ಸಂಯೋಜಿಸಿದ್ದು ವಿಶೇಷ. ಈ ನಿಟ್ಟಿನಲ್ಲಿ ಸೂಫಿಗಳು ಮುಹಮ್ಮದೀಯ ಮೂಲಸ್ವರೂಪವನ್ನು ಪ್ರಪ್ರಥಮ ಸತ್ವವೆಂದೂ, ಎಲ್ಲದರ ಹಯೂಲ ಎಂದು ಕರೆದಿದ್ದಾರೆ ಹಾಗೂ ಅದು ಎಲ್ಲ ವಸ್ತುಗಳಲ್ಲೂ ಅಡಕಗೊಂಡಿದೆ ಎಂದು ಸಿದ್ದಾಂತಿಸುತ್ತಾರೆ (ಅದ್ವೈತಾದಿ ಸಿದ್ದಾಂತಗಳು ಸಾರುವ ದೇವರ ಸರ್ವವ್ಯಾಪಕತೆಯನ್ನು ಪ್ರಸ್ತುತ ಚಿಂತನೆಯ ಆಧಾರದಲ್ಲಿ ಅರ್ಥೈಸಬಹುದೆಂದು ತೋರುತ್ತದೆ. ಅಂದರೆ ನಿಜವಾಗಿ ದೇವರಲ್ಲ ಸರ್ವವ್ಯಾಪಿಯಾದವನು.ಹೊರತು ಆತನ ಅಭಿವ್ಯಕ್ತ ರೂಪೀ ಬೆಳಕಾದ ನೂರ್ ಮುಹಮ್ಮದೀ ಆಗಿದೆ ಸರ್ವಾಂತಾರ್ಯಾಮಿಯಾಗಿರುವುದು). ಅತೀಂದ್ರಿಯ ಲೋಕದ ಅನಿಶ್ಚಿತ ಸ್ಥಿತಿಯಿಂದ ಮೊದಲು ನಿಶ್ಚಿತಗೊಂಡ ಅಸ್ತಿತ್ವ ಹಾಗೂ ಸೃಷ್ಠಿವೃತ್ತದ ಕೇಂದ್ರ ಎಂಬಿತ್ಯಾದಿ ರೂಪದಲ್ಲೂ ಅದು ಬಣ್ಣಿಸಲ್ಪಟ್ಟಿದೆ.
ಮುಹಮ್ಮದೀ ಹಕೀಕತ್ತಿನ ಮತ್ತೊಂದು ಮುಖ್ಯ ವರ್ಣನೆ ಏನೆಂದರೆ, ಅದು ಸಮಸ್ತ ಸೃಷ್ಟಿಯ ಕನ್ನಡಿಯಾಗಿದೆ ಎಂಬುದು. ಆಕೃತಿಗಳು ಪೂರ್ಣವಾಗಿ ಆವರಿಸಿ ಪ್ರತಿಬಿಂಬಿತಗೊಳ್ಳುವಾಗ ಕನ್ನಡಿ ಹೇಗೆ ಅವ್ಯಕ್ತಗೊಳ್ಳುವುದೋ ಹಾಗೆಯೇ ಸಕಲ ಸೃಷ್ಠಿಗಳು ಪ್ರತಿಬಿಂಬಿತಗೊಂಡು ಹಕೀಕತ್ ಮುಹಮ್ಮದಿಯ್ಯ ಸಂಪೂರ್ಣ ಅವ್ಯಕ್ತವಾಗಿದೆ. ಅನಿವಾರ್ಯ ಅಸ್ತಿತ್ವವನ್ನು ಹೊಂದಿದ ಅಲ್ಲಾಹು ಹಾಗೂ ಸಾಪೇಕ್ಷ ಅಸ್ತಿತ್ವ ಹೊಂದಿದ ಸೃಷ್ಟಿಗಳು ಹೀಗೆ ಪರಸ್ಪರ ಸಂಪೂರ್ಣ ಭಿನ್ನವಾದ ಉಭಯ ಪ್ರಪಂಚಗಳೆರೆಡರ ಸ್ವಭಾವ ವೈಶಿಷ್ಟ್ಯತೆಗಳನ್ನು ಮೇಳೈಸಿದೆ ಎಂಬ ನಿಟ್ಟಿನಲ್ಲಿ ಮುಹಮ್ಮದಿಯ್ಯ ಮೂಲಸತ್ತುವನ್ನು ಪ್ರಪಂಚದ್ವಯಗಳ ಕನ್ನಡಿಯೆಂದೂ ಸಮುದ್ರದ್ವಯಗಳ (ಮೂಲಭೂತ ಅಸ್ತಿತ್ವ ಮತ್ತು ಸಾಪೇಕ್ಷ ಅಸ್ತಿತ್ವ ಎಂಬೀ ಎರಡು ಸಮುದ್ರಗಳು) ಸಂಗಮವೆಂದೂ ಕರೆಯಲಾಗಿದೆ. ಜತೆಗೆ, ಅದು ಅನಿವಾರ್ಯ ಅಸ್ತಿತ್ವ (necessary existence) ಹಾಗೂ ಸಾಧ್ಯತಾ ಅಸ್ತಿತ್ವ (contingent existence ಅಂದರೆ ಇರುವಿಕೆ ಮತ್ತು ಇಲ್ಲದಿರುವಿಕೆ ಎರಡರ ಅಗತ್ಯತೆ ಇಲ್ಲದ ಅಸ್ತಿತ್ವಗಳು) ಗಳ ನಡುವಿನ ಮಾಧ್ಯಮಿಕ (ಬರ್ಝಖ್) ಲೋಕವಾಗಿದೆ. ಆದ್ದರಿಂದ, ಅಂತ ಮತ್ತು ಅನಂತವನ್ನು(finite and infinite) ಅದು ಜೋಡಿಸುತ್ತದೆ. ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ಮುಖ್ಯ ಪರದೆ ( ಹಿಜಾಬ್) ಎಂಬ ನಿಟ್ಟಿನಲ್ಲಿ ಸೃಷ್ಟಿಗಳ ಪೈಕಿ ಯಾರಿಗಾದರೂ ಅಲ್ಲಾಹುವನ್ನು ಸೇರಬೇಕಿದ್ದರೆ ನೆಬಿ (ಸ) ಯವರ ಮುಖಾಂತರ ಮಾತ್ರ ಸಾಧ್ಯ. ಹದೀಸೊಂದರಲ್ಲಿ ಹೀಗಿದೆ: “ಅಲ್ಲಾಹುವಿನ ಪರದೆ ಪ್ರಕಾಶವಾಗಿದೆ. ಅದನ್ನು ಸರಿಸಿದರೆ ಆತನ ಪ್ರಖರ ಕಿರಣಗಳು ನೋಡುವವರನ್ನು ಸುಟ್ಟು ಕರಕಲ ಮಾಡಿಬಿಡುವುದು”. ಈ ಹದೀಸಿನಲ್ಲಿ ಬಂದ ಪ್ರಕಾಶವೆಂಬ ಪರದೆಯನ್ನು ಮುಹಮ್ಮದೀ ಮೂಲರೂಪವೆಂದು ವ್ಯಾಖ್ಯಾನಿಸಲಾಗಿದೆ.
ಜಡಜಗತ್ತಿಗೆ ಬರುವಾಗ ಇದ್ದ ಅದೇ ಆಕೃತಿಯಲ್ಲೇ ಆಗಿತ್ತು ನೆಬಿಯವರ ಚೈತನ್ಯ ರೂಪಿಯಾದ ಮುಹಮ್ಮದೀ ಪ್ರಭೆಯನ್ನು ಅಲ್ಲಾಹನು ಸೃಷ್ಟಿ ಮಾಡಿದ್ದು. ದೇಶಕಾಲಾತೀತವಾಗಿ ಎಲ್ಲಾ ತರದ ಪ್ರಪಂಚಗಳಾಚೆಯಾಗಿದೆ ಅದರ ಸ್ಥಾನವಿರುವುದು. ಅಲ್ಲಾಹುವನ್ನು ಮುಹಮಮ್ಮದೀ ಹಕೀತತ್ತಿನಿಂದಲೇ ತಿಳಿಯಬೇಕು ಎಂದಿರುವಾಗ, ಅಧ್ಯಾತ್ಮದ ಹಾದಿಯಲ್ಲಿ ಸಾಗುವ ಸಾಧಕರ ಆತ್ಯಂತಿಕ ಗುರಿಯೂ ಅದೇ ಆಗಿರುತ್ತದೆ. ಸೂಫಿಗಳ ಅನುಭಾವಿಕ ಗಾನಗಳಲ್ಲಿ ಬರುವ ಸುರಪಾನ,ಲೈಲಾ, ಸ್ವರ್ಗೋದ್ಯಾನ ಎಂಬಿತ್ಯಾದಿ ಪದಗುಚ್ಛಗಳು ಅದರೆಡೆಗೇ ಬೊಟ್ಟುಮಾಡುವುದು.
ದೇವರ ಪವಿತ್ರ ಅಸ್ತಿತ್ವ ಖಂಡಿತವಾಗಿಯೂ ಬಹುತ್ವ ತುಂಬಿದ ಸೃಷ್ಟಿಗಳಾದ್ಯಂತ ನೇರವಾಗಿ ಅಭಿವ್ಯಕ್ತಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಒಂದು ಮಾಧ್ಯಮ ಅನಿವಾರ್ಯವಾಗುತ್ತದೆ. ಪ್ರವಾದಿವರ್ಯರೇ ಆಗಿದ್ದಾರೆ ಆ ಮಾಧ್ಯಮ. ಒಟ್ಟಾರೆ, ಪ್ರವಾದಿ (ಸ) ಉತ್ತರರದಾಯಿತ್ವ ಅತ್ಯಂತ ಮಹತ್ವಕಾರಿಯಾದದ್ದು. ದೇವರ ಸರ್ವ ನಾಮಗಳನ್ನು ತನ್ನ ಸ್ವರೂಪ ಹಾಗೂ ಕರ್ಮಗಳ ಮೂಲಕ ಪ್ರಕಟಪಡಿಸುತ್ತಾರೆ ಹಾಗೂ ಜಗತ್ತಿನಾದ್ಯಂತ ದೈವಿಕ ನಾಮಗಳನ್ನು ಪಸರಿಸುವ ಮಾಧ್ಯಮವಾಗಿಯೂ ಕಾರ್ಯಾಚರಿಸುತ್ತಾರೆ. ಪ್ರಸ್ತುತ ವಿಶ್ಲೇಷಣೆಯ ಆಧಾರದಲ್ಲೇ, “ ನೀವು ಇಲ್ಲದಿದ್ದರೆ, ಜಗತ್ತನ್ನೇ ನಾನು ಸೃಷ್ಟಿಸುತ್ತಿರಲಿಲ್ಲ “ ಎಂಬ ಹದೀಸ್ ಖುದ್ಸಿಯನ್ನು ಅರ್ಥ ಮಾಡಬೇಕಾಗಿದೆ.
ಮುಂದೆ ಖೈಸರಿಯವರು “ದೈವಿಕ ದರ್ಜೆಗಳು” (ಅದ್ದರಜಾತುಲ್ ಇಲಾಹಿಯ್ಯ) ಎಂಬ ವಿಶ್ವವೈಜ್ಞಾನಿಕ ಪರಿಕಲ್ಪನೆಯನ್ನು ಚರ್ಚೆಗೆ ಎಳೆಯುತ್ತಾರೆ.ಇಬ್ನು ಅರಬಿಯವರ ಕೆಳಗಿನ ಪ್ರಸ್ತಾವನೆಯ ಸಂದರ್ಭವಾಗಿದೆ ಈ ಚರ್ಚೆಯ ಹಿನ್ನಲೆ:
“ ಖುರ್ ಆನಿನಲ್ಲಿ ಅಲ್ಲಾಹು ತನ್ನನ್ನು ʼದರ್ಜೆಗಳನ್ನು ಏರಿಸುವವನು ಹಾಗೂ ಸಿಂಹಾಸನದ ಮಾಲಿಕ ʼ ಎಂದು ವಿಶೇಷಿಸಿದ್ದಾನೆ. ಅರ್ಶಿನ ಮೇಲೆ ತನ್ನ ಪರಿಪೂರ್ಣ ಕರುಣಾಮಯಿ (ಅರ್ರಹ್ಮಾನ್) ಎಂಬ ನಾಮದೊಂದಿಗೆ ಆಸೀನನಾಗಿದ್ದಾನೆ. ಆದ್ದರಿಂದಲೇ, ʼ ನನ್ನ ಕರುಣೆ ಸಕಲ ವಸ್ತುಗಳನ್ನು ಆಚ್ಛಾದಿಸಿದೆʼ ಎಂದು ಅಲ್ಲಾಹು ಹೇಳಿದಂತೆಯೇ ಅರ್ಶ್ ಅಥವಾ ಸಿಂಹಾಸನದ ಕೆಳಗೆ ಆತನ ಕರುಣೆಯನ್ನು ಪಡೆಯದ ಯಾವ ವಸ್ತುವೂ ಇರಲಾರದು. ಪ್ರಸ್ತುತ ಅರ್ಶಿನ ಮೂಲಕ ಲೋಕವಿಡೀ ಕರುಣೆಯ ಪ್ರಸರಣವನ್ನು (ಸರಯಾನು ರ್ರಹ್ಮ) ಸ್ವೀಕರಿಸುತ್ತದೆ”
ಖೈಸರಿ ಪ್ರಕಾರ, ದೈವಿಕತೆಯ ಈ ದರ್ಜೆಗಳಿಂದ ʼಪ್ರಥಮ ವಿವೇಕʼ ಅಸ್ತಿತ್ವಕ್ಕೆ ಬಂತು ಹಾಗೂ ಅದರಿಂದ ʼವಿಶ್ವಾತ್ಮ ʼ ಇರವನ್ನು ಪಡೆಯಿತು. ಪ್ರಸ್ತುತ ವಿಶ್ವಾತ್ಮ ದಿಂದ ಎಲ್ಲಾ ಬಗೆಯ ವೈಚಾರಿಕ ಆತ್ಮಗಳು, ಭೌತ ವಸ್ತುಗಳು ಹಾಗೂ ಒಟ್ಟಾರೆ ಜಗತ್ತು ಅಸ್ತಿತ್ವವನ್ನು ಕಂಡಿತು. ಆಕಾಶ ಮತ್ತು ಭೂಮಿಯ ಮೂಲ ಪದಾರ್ಥಗಳಿಂದ ʼಕುರ್ಸ್ʼ ಕೂಡ ಸೃಷ್ಟಿಸಲ್ಪಟ್ಟಿತು. ಸೃಷ್ಟಿಯ ಈ ಪ್ರಕ್ರಿಯೆಯ ವಿವರಣೆ, ಮಾಧ್ಯಮಿಕ ಜಗತ್ತು ಯಾ ಭಾವನಾತ್ಮಕ ಜಗತ್ತು (ಮಲಕೂತ್) ಮತ್ತು ಇಂದ್ರಿಯಗೋಚರ (ಮುಲ್ಕ್) ಜಗತ್ತಿನ ಕುರಿತು ಹೆಚ್ಚು ಸ್ಪಷ್ಟತೆಯನ್ನು ನೀಡುತ್ತದೆ. ಇಬ್ನು ಅರಬಿಯವರ ಅರ್ಶಿನಿಂದ ಸಕಲ ಸೃಷ್ಟಿಗಳಿಗೆ ಕರುಣೆಯ ವಿತರಣೆಯಾಗುತ್ತದೆ ಎಂಬ ವಿಶ್ಲೇಷಣೆಯ ಆಧಾರದಲ್ಲಿ ಖೈಸರಿಯವರು ನೀಡುವ ವ್ಯಾಖ್ಯಾನ ಆಸಕ್ತಿದಾಯಕವಾಗಿದೆ. ಅವರ ಅಭಿಪ್ರಾಯದಲ್ಲಿ, ಎರಡು ಬಗೆಯ ಅರ್ಶ್ ಇದೆ; ಆಧ್ಯಾತ್ಮಿಕ ಮತ್ತು ಭೌತಿಕ. ಇವೆರಡರ ಪೈಕಿ, ಆಧ್ಯಾತ್ಮಿಕ ಅರ್ಶನ್ನು ಮುಹಮ್ಮದೀ ಮೂಲಸ್ವರೂಪದೊಂದಿಗೆ ಸಮೀಕರಿಸುತ್ತಾರೆ. ʼಸಂಪೂರ್ಣ ದಯಾಮಯಿʼ ಎಂಬ ನಾಮ ಅರ್ಶಿನ ಮೇಲೆ ನೆಲೆನಿಂತಿದೆ ಎಂಬುವುದು ಇಬ್ನು ಅರಬಿಯವರ ಅಂಬೋಣ. ಹಾಗಾದರೆ, ಪ್ರಸ್ತುತ ನಾಮಕ್ಕೂ ಮುಹಮ್ಮದೀ ನೈಜಸ್ವರೂಪಕ್ಕೂ ಏನು ಸಂಬಂಧ?. ಈ ಪ್ರಶ್ನೆಗೂ ಸುಸಂಬದ್ದ ಉತ್ತರವನ್ನಾಗಿದೆ ಖೈಸರಿ ನೀಡುವುದು:
“ ವಸ್ತು ಪ್ರಪಂಚಕ್ಕೆ ಇಳಿಯುವ ಮೂಲಕವಾಗಿದೆ ಕರುಣೆಯ ಸೂಕ್ತ ವಿತರಣೆ ಸಾಧ್ಯವಾಗುವುದು. ಆದ್ದರಿಂದ, ದೇವರ ಸರ್ವ ಅಭಿವ್ಯಕ್ತಿಗಳ ಕೇಂದ್ರವಾಗಿರುವ ಮುಹಮ್ಮದೀ ಮೂಲಸ್ವರೂಪವು ಅರ್ಶಿನ ಮೇಲೆ ಸ್ಥಾಪಿತವಾಗಿದೆ. ಆ ಮೂಲಕ ಅದರ ಕರುಣೆ ಜಗದಗಲ ವ್ಯಾಪಿಸುತ್ತದೆ ಮತ್ತು ಸೃಷ್ಟಿ ಪ್ರಪಂಚನ್ನಿಡೀ ಆವರಿಸುತ್ತದೆ. ಇದನ್ನೇ ಅಲ್ಲಾಹು ಹೇಳಿದ್ದು; ನಿಮ್ಮನ್ನು ಇಡೀ ಜಗತ್ತಿಗೆ ನಾವು ಕರುಣೆಯಾಗಿ ನೇಮಕಗೊಳಿಸಿದ್ದೇವೆ”
ಸ್ಪಷ್ಟವಾಗಿ ಹೇಳುವುದಾದರೆ, ಮುಹಮ್ಮದೀ ಚೈತನ್ಯವು (ಹಕೀಕತ್ ಮುಹಮ್ಮದಿಯ್ಯ) ದೈವಿಕ ಮೂಲದಿಂದ ಮೊಟ್ಟ ಮೊದಲನೆಯದಾಗಿ ಉದಯಗೊಂಡ ಅಸ್ತಿತ್ವ ಎಂಬ ನಿಟ್ಟಿನಲ್ಲಿ, ಅಲ್ಲಾಹನ ಎಲ್ಲಾ ನಾಮಗಳನ್ನು ಸ್ವೀಕರಿಸುವ ಹಾಗೂ ಪ್ರಕಟಪಡಿಸುವ ಸೃಷ್ಟಿಯಾಗಿದೆ. ಅರ್ರಹ್ಮಾನ್ ಎಮಬುವುದೂ ಕೂಡ ಅಲ್ಲಾಹನ ನಾಮವೇ. ಪರಮ ಕರುಣಾಮಯಿ ಎಂಬ ನಾಮದ ಸ್ವೀಕಾರ ಕೇಂದ್ರವೆಂಬ ನೆಲೆಯಲ್ಲಿ, ಆಧ್ಯಾತ್ಮಿಕ ಅರ್ಶ್ ಅಥವಾ ಮುಹಮ್ಮದೀ ಮೂಲಸ್ವರೂಪ ಭೌತಿಕ ಅರ್ಶಿನ ಮೇಲೆ ಆಸೀನನಾಗಿ ಜಗದಗಲ ಕರುಣೆಯ ಪ್ರಸರಣವನ್ನು ಮಾಡುತ್ತಿದೆ. ಒಟ್ಟಾರೆ, ವಿಶ್ವ ವಿಜ್ಞಾನದಲ್ಲಿ ಮುಹಮ್ಮದೀ ಸ್ವರೂಪದ ಸ್ಥಾನವನ್ನು ಇಬ್ನು ಅರಬಿಯವರ ಒಳನೋಟದ ಆಧಾರದಲ್ಲಿ ದಾವೂದುಲ್ ಖೈಸರಿಯವರು ಹಲವು ಬಗೆಯಲ್ಲಿ ವಿವರಿಸಿದ್ದಾರೆ.
ಮುಹಮ್ಮದ್ ರುಸ್ತುಂ
ಅನು : ಎಂ.ಎಂ. ಸುರೈಜಿ
Nice