ಸುಗಂಧ ಹಾಗೂ ಹೃದಯ: |
ಸುಗಂಧ ಹಾಗೂ ಹೃದಯ ಸಂವೇದನೆಯ ನಡುವಿನ ಸಂಬಂಧವು ಇಸ್ಲಾಮಿಕ್ ವೈದ್ಯಶಾಸ್ತ್ರ ಸಂರಚನೆಯ ಪ್ರಮುಖ ಚರ್ಚಾ ವಿಷಯ. ಭಾರತದಲ್ಲಿ ಗ್ರೀಕ್- ಅರೇಬಿಕ್ (ಯುನಾನಿ) ವೈದ್ಯಶಾಸ್ತ್ರ ವಿಜ್ಞಾನದಲ್ಲಿ ನಿಪುಣರಾದ ತತ್ವಜ್ಞಾನಿ ಇಬ್ನ್ ಸೀನಾರ ಬರಹಗಳು ಈ ವಿಷಯದಲ್ಲಿ ಸುಪ್ರಸಿದ್ಧ. ಅವರ ‘ದಿ ಮೆಡಿಸಿನ್ ಆಫ್ ದಿ ಹಾರ್ಟ್’ (العدوية العقيبية) ಎಂಬ ಗ್ರಂಥ ಗ್ರೀಕ್- ಅರಬ್ ವೈದ್ಯಕೀಯ ಸಂಪ್ರದಾಯದ ಸಂವೇದನೆಯನ್ನು ಕೇಂದ್ರವಾಗಿಟ್ಟು ಹೃದಯದ ಆರೋಗ್ಯ ಮತ್ತು ಸುಗಂಧದ ನಡುವಿನ ಸಂಬಂಧಗಳ ಕುರಿತು ಚರ್ಚಿಸುತ್ತದೆ.
ಆರೋಗ್ಯ ಸಂರಕ್ಷಣೆ ಗ್ರೀಕ್- ಅರಬ್ ವೈದ್ಯಶಾಸ್ತ್ರದ ಪ್ರಮುಖ ಭಾಗವಾಗಿರುವುದರಿಂದ ‘ಹೃದಯ ಸಂರಕ್ಷಣೆ’ ಮುಸ್ಲಿಂ ಜೀವನದ ಒಂದು ಪ್ರಮುಖ ಭಾಗವಾಗಿ ಬದಲಾಗಿ ಹೃದಯದ ಪೋಷಣೆಯಲ್ಲಿ ಸುಗಂಧ ಮುಖ್ಯ ಪಾತ್ರ ವಹಿಸುತ್ತದೆ. ಭಾರತದ ಪ್ರಸಿದ್ಧ ರಾಜ ಆದಿಲ್ ಷಾ ಆಳ್ವಿಕೆಯಲ್ಲಿ ರಚಿಸಲ್ಪಟ್ಟ Itrya-i Nauras Shahi ಎಂಬ ಗ್ರಂಥ ಸಹಿತ ಹಲವಾರು ಕೃತಿಗಳು ಸುಗಂಧ ದ್ರವ್ಯ ‘ಹೃದಯದ ಪ್ರಧಾನ ಆಹಾರ’ ಎಂದು ಹೇಳುತ್ತದೆ.
ಮಧ್ಯಕಾಲೀನ ಮುಸ್ಲಿಂ ಜಗತ್ತಿನಲ್ಲಿ ಸುಗಂಧ ದ್ರವ್ಯಗಳು ‘ಹೃದಯದ ಔಷಧಿ’ ಎಂದು ಪ್ರಸಿದ್ಧಿ ಗಿಟ್ಟಿಸಿದ್ದವು. ಗ್ರೀಕ್- ಅರೇಬಿಕ್ ವೈದ್ಯಕೀಯ ಪರಂಪರೆಯ ಸುಗಂಧ ದ್ರವ್ಯಗಳ ಕಾರ್ಯಚಟುವಟಿಕೆಯು ಮಾನವನ ದೇಹಕ್ಕೆ ಸ್ವಾಭಾವಿಕವಾಗಿ ಅಗತ್ಯವಿರುವ ಘ್ರಾಣ ಸಾಮರ್ಥ್ಯಕ್ಕೆ ಸಂಬಂಧಿಸಿದ ನಿರ್ದಿಷ್ಟ ವಾಸನೆಯನ್ನು ಅನುಭೋಗಿಸಲು ಮತ್ತು ಸಮನ್ವಯಗೊಳಿಸಲು ಹೃದಯವನ್ನು ಸಜ್ಜುಗೊಳಿಸುತ್ತದೆ. ಈ ಸುಗಂಧ ದ್ರವ್ಯಗಳು ಮತ್ತು ಸುಗಂಧದ ಪ್ರತೀ ಪದಾರ್ಥಗಳು ಹೃದಯವನ್ನು ಪ್ರಚೋದಿಸುತ್ತದೆ (Mufrih) ಎಂದು ಇಬ್ನ್ ಸೀನಾ ನಂಬಿದ್ದರು. ಈ ಪ್ರಚೋದನೆಯು ಅವರ ದೂರದೃಷ್ಟಿಯಲ್ಲಿ ಸುಗಂಧವು ಮನುಷ್ಯನ ನೈಸರ್ಗಿಕ ಸಂವೇದನೆಯ ಪ್ರಜ್ಞೆಗೆ ಹೊಂದಿಕೊಂಡಾಗ ಸಂಭವಿಸುವ ಆತ್ಮದ ರಿಫ್ರೆಶರ್ ಕೂಡಾ ಆಗಿದೆ.
ಇಬ್ನ್ ಸೀನಾರ ಪ್ರಕಾರ ಹೃದಯದೊಂದಿಗಿರುವ ‘ಆತ್ಮ ಚೈತನ್ಯ’ (ಅವರು ಅದನ್ನು ರೂಹ್ ಎಂದು ಕರೆಯುತ್ತಾರೆ, ಅದನ್ನು ಆತ್ಮ ಸತ್ವ ಎಂದು ಅನುವಾದಿಸಲಾಗುತ್ತದೆ) ಸುಗಂಧ ದ್ರವ್ಯಗಳನ್ನು ಆಘ್ರಾಣಿಸುವ ಮೂಲಕ ಹೃದಯದ ಕಾರ್ಯವೈಖರಿಗಳನ್ನು ಸಕ್ರೀಯಗೊಳಿಸುತ್ತದೆ. ಈ ಆತ್ಮೀಯ ಚೈತನ್ಯದ ಗಣನೆ ಸುಖಲೋಲುಪತೆಯ ಅಭಿಲಾಷೆಯನ್ನು ಸ್ವಾಧೀನಿಸಿ ಸಂತೋಷದ ಅತೀ ಸಣ್ಣ ಉದ್ದೀಪನದೊಂದಿಗೂ, ಅವಕಾಶಗಳೊಂದಿಗೂ ಸಹ ಪ್ರತಿಕ್ರಯಿಸಲು ಹೃದಯವನ್ನು ತಯಾರು ಮಾಡುತ್ತದೆ.
ಸುಗಂಧ ದ್ರವ್ಯಗಳನ್ನು ಕ್ರೋಢೀಕರಿಸಿ ಆತ ತಯಾರು ಮಾಡಿಟ್ಟ ಸಂದೂಕದಲ್ಲಿ ಸ್ಥಳ ಗಳಿಸಿದ್ದು ‘ಶುದ್ಧ’, ನಿರ್ಮಲ, ಸಂತುಷ್ಟದಾಯಕ ಪರಿಮಳ ಇರುವ ವಾಸನೆಯಿರುವ ಹೂವುಗಳ ಹೆಸರುಗಳನ್ನಾಗಿತ್ತು.
ಆತ್ಮವನ್ನು ಸಂತೋಷದ ಸಂವೇದನಾ ಅನುಭವಕ್ಕೆ ಹಾಗು ಸೌಂದರ್ಯ ಆಸ್ವಾದನೆಗೆ ಯೋಗ್ಯವಾದ ರೀತಿಯಲ್ಲಿ ಕ್ರಮಿಸಲು ಅವೆಲ್ಲವೂ ಸಹಾಯಕವಾಗುವುದು.
ಸುಗಂಧವು ವಾಸನೆಯ ಪ್ರಜ್ಞೆಯನ್ನು ಬಲಪಡಿಸುತ್ತದೆ ಮತ್ತು ಔನ್ನತ್ಯ ಮಟ್ಟದಲ್ಲಿರುವ ಸಂವೇದನೆಯನ್ನು ಆಸ್ವಾದಿಸಲು ಘ್ರಾಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಇಬ್ನ್ ಸೀನಾ ಉಲ್ಲೇಖಿಸಿದ್ದಾರೆ. ಸಂವೇದನಾ ಸಾಮರ್ಥ್ಯ ಬಲಗೊಂಡಾಗ ರುಚಿ ಮೊಗ್ಗುಗಳು (zauq), ಸಿಹಿ ಪದಾರ್ಥ ಹಾಗೂ ಘ್ರಾಣ ಗ್ರಂಥಿಗಳಿಂದ ತೃಪ್ತಿ ಮತ್ತು ಸಂತೋಷದ ಅನುಭೂತಿ ಪ್ರಾಪ್ತಿಯಾಗುತ್ತದೆ..’ ಒಟ್ಟಿನಲ್ಲಿ, ಸುಗಂಧ ಆತ್ಮವನ್ನು ಶುದ್ಧೀಕರಿಸಲ್ಪಡುವ ಇಂದ್ರಿಯದೊಂದಿಗೆ ಸಾಮರಸ್ಯವಿರುವ ಉತ್ಪನ್ನವಾಗಿದೆ. ನೈಸರ್ಗಿಕವಾಗಿ ಸಿಗುವ ಸುಗಂಧ ದ್ರವ್ಯ ಉದ್ಯಾನದಂತಹ ಆಹ್ಲಾದಕರ ವಾತಾವರಣದಿಂದ ಮಾತ್ರ ದೊರಕಬಹುದು. ಇದರ ಅನುಪಸ್ಥಿತಿಯಿದ್ದರೆ ಮೂಗಿಗೆ ಕೊಳೆತ ವಾಸನೆ ಬಡಿದು ಅಂತಹಾ ಸ್ಥಳಗಳಲ್ಲಿ ಸಂವೇದನಾ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸಂತೋಷವನ್ನು ಸೃಷ್ಟಿಸುವಲ್ಲಿ ವಿಫಲವಾಗುತ್ತದೆ.
ಇಂಡೋ- ಇಸ್ಲಾಮಿಕ್ ಸುಗಂಧ ಪರಂಪರೆ..
ಭಾರತದ ಮುಸ್ಲಿಂ ವೈದ್ಯಕೀಯ ವಿದ್ವಾಂಸರು ಭಾರತದಲ್ಲಿ ಹುಟ್ಟಿದ ಮತ್ತು ಭಾರತೀಯ ಸಂಪ್ರದಾಯದ ಭಾಗವಾಗಿರುವ ಹೂವುಗಳನ್ನು ಸಂಶೋಧಿಸಿದ್ದಾರೆ. ಭಾರತದಲ್ಲಿ ಅನೇಕ ಪರಿಮಳಯುಕ್ತ ಹೂವುಗಳು ಪ್ರಾಣಾಯ, ಕಾಮ ಹಾಗೂ ಮದನಾ ಎಂಬ ದೇವರುಗಳ ಹೆಸರಿಡಲಾಗಿದೆ. ಆ ಹೆಸರುಗಳು ಸುಗಂಧವನ್ನು ಉತ್ತೇಜಿಸುತ್ತದೆ ಎಂದು ಮನದಟ್ಟು ಮಾಡಬಹುದು. ಉದಾಹರಣೆಗೆ ‘ಮದನ್ ಮಾಸ್ಟ್’ ಎಂಬ ಹೆಸರು. ಈ ಪದವು ಲೈಂಗಿಕ ಪ್ರಚೋದನೆಗೆ ಕಾರಣವಾಗುವ ಗೆಡ್ಡೆಯ ವರ್ಗಕ್ಕೆ ಸೇರಿದ ಸಸ್ಯ (Amorphophallus Campanulatus) ಎಂಬ ಅರ್ಥ ನೀಡುತ್ತದೆ. ಇದಲ್ಲದೆ, ಗುರಿಯನ್ನು ಮರೆಮಾಚಿ ಪ್ರಣಯಾಸ್ತ್ರ ಸ್ಪರ್ಶಿಸುವ ಮದನಾ ದೇವರಂತೆ, ಎಲೆಗೊಂಚಲುಗಳಲ್ಲಿ ಅಡಗಿ ಸೇಬಿನಂತೆ ಪರಿಮಳ ಹರಡುವ ‘ಮನೋರಂಜಿತ’ (ಪೊದೆಸಸ್ಯ) ಎಂಬ ಅರ್ಥವೂ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಪರಿಮಳಯುಕ್ತ ಸಸ್ಯ ಪ್ರಭೇದಗಳನ್ನು ಹೂವುಗಳ ಮಕರಂದವನ್ನು ಸೂಚಿಸಲು ಮಧು (ಜೇನುತುಪ್ಪ) ಎಂಬ ಪದದೊಂದಿಗೆ ಹೆಚ್ಚಾಗಿ ಸಂಯೋಜಿಸಲಾಗುತ್ತದೆ. ಉದ್ದವಾಗಿ ಹಬ್ಬುವ ಹಾಗಲ ಕಾಯಿ ಬಳ್ಳಿಗಿಡದ ಬದಲಾಗಿ ‘ಮಧು ಮಲಾತಿ’ ಎಂಬ ಹೆಸರನ್ನು ಬಳಸಲಾಗುತ್ತದೆ. ‘ಮಾಧವಿ’ ಎಂಬ ಹೆಸರನ್ನು ಇನ್ನೊಂದು ಬಳ್ಳಿಗಿಡವಾದ ‘Sphenodesme paniculata’ ಎಂಬ ಸಸ್ಯವರ್ಗದ ಪರ್ಯಾಯವಾಗಿ, ‘ಮಧುಕ್ಕಾ ಇಂಡಿಕಾ’ ಎಂಬ ಹೆಸರು ‘Madhuca longifolia’ ಎಂಬ ರೂಕ್ಷ ಗಂಧವುಳ್ಳ ಒಂದು ಔಷಧ ಸಸ್ಯದ ಪರ್ಯಾಯವಾಗಿ ಉಪಯೋಗಿಸಲಾಗುತ್ತದೆ. ಇದಲ್ಲದೆ, ಸುಗಂಧ ಸಸ್ಯಗಳಿಗೆ ಸಂಭಂದಪಟ್ಟ
ಇಂಡೋ- ಇಸ್ಲಾಮಿಕ್ ಹಿನ್ನೆಲೆಯಲ್ಲಿ ವಾಸನೆ (aroma) ಮತ್ತು ರುಚಿಗೆ (taste) ಪರಿಮಳಯುಕ್ತ ಹೂವುಗಳ ಹೆಸರುಗಳನ್ನು ಉಲ್ಲೇಖಿಸಿರುವುದನ್ನು ಗಮನಿಸಬಹುದು.
ಭಾರತದಲ್ಲಿ ಸುಗಂಧ ಬಗ್ಗೆ ಬರೆದ ಪ್ರಮುಖ ಪುಸ್ತಕಗಳಲ್ಲಿ ಒಂದು ‘ಇಥರಿಯಾ ನುಸ್ರತ್ ಶಾಹಿ’. ಅನೇಕ ಸುಗಂಧ ದ್ರವ್ಯದ ಮಿಶ್ರಣ ಹಾಗೂ ರುಚಿ ಹೃದಯಕ್ಕೆ ಸಂತೋಷ ನೀಡುವಲ್ಲಿಯೂ, ಮಾನಸಿಕ ಸಮಾಧಾನ ಸಿಗುವುದರಲ್ಲಿಯೂ ಸಂಶಯವಿಲ್ಲ ಎಂದು ಈ ಕೃತಿ ಪ್ರತಿಪಾದಿಸುತ್ತದೆ. ಮೌಲಾನಾ ಹಬೀಬ್ ಷರೀಫ್‌ರ ಪುತ್ರ ಸುಗಂಧ ದ್ರವ್ಯದ ವ್ಯಾಪಾರಿ ನಿಝಾಮುದ್ದೀನ್ ಮಹ್ಮೂದ್‌ರ ವಿವಿಧ ಗ್ರಂಥಗಳನ್ನು ಆಧರಿಸಿ ಈ ಗ್ರಂಥವನ್ನು ರಚಿಸಲಾಗಿದೆ. ‘ಇಥರಿಯಾ ನುಸ್ರತ್ ಶಾಹಿ’ಯ ಹಸ್ತಪ್ರತಿ ಅಂದಿನ ಬಿಜಾಪುರದ ಆಡಳಿತಾಧಿಕಾರಿ ಎರಡನೇ ಇಬ್ರಾಹಿಂ ಆದಿಲ್ ಷಾಗೆ ಉಡುಗೊರೆಯಾಗಿ ನೀಡಿದ್ದರು. ಮೂಲ ಗ್ರಂಥವು ”ನಿನ್ನ ಔದಾರ್ಯವನ್ನು ಹಾತೊರೆಯುವ ಪ್ರತಿಯೊಂದು ಹೃದಯಕ್ಕೆ ನಿನ್ನ ಭವನದ ಸುಗಂಧದಿಂದ ಅಹರ್ನಿಶಿಯಾಗಿ ಅನುಗ್ರಹಿಸಬೇಕು..” ಎಂಬ ದೈವೀ ವಾಕ್ಯದಿಂದ ಪ್ರಾರಂಭವಾಗುತ್ತದೆ. ದುರದೃಷ್ಟವಶಾತ್, ಪುಸ್ತಕದ ಬರವಣಿಗೆಯ ನಿಖರವಾದ ಸಮಯ ಗುರುತಿಸಿದ ಪುಟಗಳು ಕಳೆದುಹೋಗಿವೆ. ಆದಾಗ್ಯೂ, ಎರಡನೇ ಆದಿಲ್ ಷಾಗೆ ಸಮರ್ಪಿತವಾದ ಕೃತಿಯನ್ನು ಹದಿನೇಳನೇ ಶತಮಾನದಲ್ಲಿ ಬರೆಯಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.
ಎರಡು ಶತಮಾನಗಳ ಕಾಲ ಆದಿಲ್ ಷಾ ರಾಜವಂಶವು 1686 ರಲ್ಲಿ ಮೊಘಲ್ ಸಾಮ್ರಾಜ್ಯ ವಶಪಡಿಸಿಕೊಳ್ಳುವವರೆಗೂ ಭಾರತದ ಸಂಪೂರ್ಣ ಪಶ್ಚಿಮ ಭಾಗವನ್ನು ‘ಬಿಜಾಪುರ’ ತನ್ನ ರಾಜಧಾನಿಯಾಗಿ ಮಾಡಿ ಸಮೃದ್ಧವಾಗಿ ಆಳಿದವು. ಇದು ಪೂರ್ವ ಆಧುನಿಕ ಕಾಲದಲ್ಲಿ ಡೆಕ್ಕನ್ ಪ್ರದೇಶದಲ್ಲಿ ಗೋಲ್ಕೊಂಡಾದಂತೆಯೇ ವೈವಿಧ್ಯಮಯ ಮತ್ತು ಬಹುತ್ವವಾದಿ ಸಮಾಜದ ಸೃಷ್ಟಿಗೆ ಹೆಚ್ಚಿನ ಕೊಡುಗೆ ನೀಡಿದ ನಗರವಾಗಿದೆ.
ಎರಡನೇ ಸುಲ್ತಾನ್ ಆದಿಲ್ ಷಾ ನನ್ನು ‘ನವರಸ್ ಷಾ’ (ನವದ್ರವ್ಯಗಳ ರಾಜ) ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದರು. ದಕ್‌ನೀ ಉರ್ದುವಿನಲ್ಲಿ Nauras ಎಂಬ ಪದದ ಅರ್ಥ ಒಂಭತ್ತು ರುಚಿ, ಒಂಭತ್ತು ಭಾವನಾತ್ಮಕ ಶೈಲಿ ಹಾಗೂ ಒಂಭತ್ತು ಕಾವ್ಯಾತ್ಮಕ ಶೈಲಿಯಾಗಿದೆ ಎಂದು ಸುಪ್ರಸಿದ್ಧ. ಈ ಪದ ಭಾರತೀಯ ಸೌಂದರ್ಯ ಶಾಸ್ತ್ರದ ಮೂಲ ಪರಿಕಲ್ಪನೆಯಾದ ‘ರಸ’ ದಿಂದ ಪಡೆಯಲಾಗಿದೆ. ಆದ್ದರಿಂದಲೇ ಈ ಪದ ಸುಲ್ತಾನನಿಗೆ ಭಾರೀ ಅಪ್ಯಾಯಮಾನವಾದ್ಯವು ಎಂದು ಊಹಿಸಬಹುದು. ಕ್ರಿ.ಶ 1603 ರಲ್ಲಿ ಖುದ್ದಾಗಿ ಸುಲ್ತಾನನೇ ನಿರ್ಮಿಸಿದ ಸುಂದರ ನಗರಕ್ಕೆ ‘ನವರಸ್ ಪುರ’ ಎಂದು ನಾಮಕರಣ ಮಾಡಿ, ಸಂಗೀತ ಮಂಟಪಗಳಿಂದ ಅಲಂಕೃತವಾದ ಹೃದ್ಯ ಭಾಗಗಳನ್ನು ‘ನೌರಸ್ ಮಹಲ್’ ಎಂದು ಕರೆದರು. ಈ ಪದವು ಸುಲ್ತಾನನ ‘ಕಿತಾಬೇ ನವರಸ್’ ಎಂಬ ಸ್ತುತಿ ಗೀತೆಗಳ ಶೀರ್ಷಿಕೆಯಲ್ಲೂ ಕಂಡು ಬರುತ್ತದೆ. ದಕ್ಕನೀ ಉರ್ದುವಿನಲ್ಲಿ ರಚಿಸಲ್ಪಟ್ಟ ಈ ಗ್ರಂಥದಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಒಂಭತ್ತು ಕಾವ್ಯಾತ್ಮಕ ಶೈಲಿಯ ಕುರಿತು ಪರಾಮರ್ಶೆಯಿದೆ. ಈ ಕಾರಣಗಳಿಗಾಗಿ ಸುಗಂಧ ದ್ರವ್ಯಗಳ ಕುರಿತು ಬರೆಯಲ್ಪಟ್ಟ ಈ ಕೃತಿಯ ವಿಷಯಗಳಿಗಾಗಿ ಹೆಚ್ಚು ಅಲೆದಾಡಬೇಕಾಗಿಲ್ಲ.
ಆದಿಲ್ ಷಾರನ್ನು ಕಲೆ ಮತ್ತು ಸಂಗೀತ ಪ್ರೋತ್ಸಾಹಿಸಿದ ವ್ಯಕ್ತಿ ಎಂದು ಇತಿಹಾಸ ಬಣ್ಣಿಸುತ್ತಿದೆ. ಭಾರತೀಯ ಸಂಗೀತದ ಎಲ್ಲಾ 64 ಪ್ರಕಾರಗಳಲ್ಲಿ ಪರಿಣಿತರಾಗಿದ್ದ ಸುಲ್ತಾನ್ ರನ್ನು ಜಗದ್ಗುರು (Universal teacher) ಎಂದು ಹಿಂದೂ ಪ್ರಜೆಗಳು ಸಂಬೋಧಿಸುತ್ತಿದ್ದರು. ಬಹುತೇಕ ಅದೇ ಅರ್ಥ ಬರುವ ‘ಉಸ್ತಾದೇ ಝಮಾನ್’ ಎಂದು ಗ್ರಂಥಕರ್ತ ಮೂಲ ಕೃತಿಯಲ್ಲಿ ದಾಖಲಿಸಿದ್ದಾರೆ.
ಕನ್ನೌಜ್, ಭಾರತದ ಸುಗಂಧ ದ್ರವ್ಯದ ರಾಜಧಾನಿಯೆಂದು ಖ್ಯಾತಿ ಪಡೆದಿದೆ. ಇದು ಉತ್ತರಪ್ರದೇಶದ ಒಂದು ಕುಗ್ರಾಮ.
ಕನ್ನೌಜ್ ಸುಗಂಧ ದ್ರವ್ಯದ ಐತಿಹ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಸಾವಿರಾರು ವರ್ಷಗಳಿಂದ ಕನ್ನೌಜ್ ಗ್ರಾಮದಲ್ಲಿ ಸುಗಂಧ ದ್ರವ್ಯ ವ್ಯವಹಾರ ಚಾಲ್ತಿಯಲ್ಲಿದೆ. ‘ಇದು ಸಾವಿರಾರು ವರ್ಷಗಳಿಂದ ದೇಶದ ಪರಿಮಳಯುಕ್ತ ನಗರವಾಗಿದೆ’ ಎಂದು ಇತಿಹಾಸಕಾರರು ಹೇಳುತ್ತಾರೆ.
ಸುಗಂಧ ದ್ರವ್ಯ ಉತ್ಪಾದನಾ ಕೌಶಲ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗುತ್ತದೆ. ಕನ್ನೌಜ್, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸುಗಂಧ ದ್ರವ್ಯ ಮಾರುಕಟ್ಟೆಯನ್ನು ಹೊಂದಿದೆ.
ಮೂಲ- ಅಲಿ ಅಕ್ಬರ್ ಹುಸೈನ್
ಅನು- ಅಶ್ರಫ್ ನಾವೂರು
Super ❣️👍