ಅಲ್-ನಖ್ಬಾ : ಫೆಲೆಸ್ತೀನಿನ ಮರುಯಾತ್ರೆಯ ಕೀಲಿಕೈ

ಅಲ್ ನಖ್ಬಾ ಎಂಬ ಪದದ ಅರ್ಥ ‘ದುರಂತ’ ಎಂದು ಮಾತ್ರವಲ್ಲ. ಅರಬಿ ಒಂದು ಪದದಲ್ಲಿ ಅನೇಕ ಅರ್ಥಗಳನ್ನು ಹುಟ್ಟಿಸಬಲ್ಲ ಭಾಷೆ. ಮರುಭೂಮಿಯ ಅನಿರ್ವಚನೀಯ ಗುಣ ವೈರುಧ್ಯಗಳು, ಆಕಸ್ಮಿಕತೆ, ವ್ಯಾಕುಲತೆ, ಆಶಂಕೆ ಇವೆಲ್ಲಾ ಆ ಭಾಷೆಗೆ ಇನ್ನಿಲ್ಲದ ಪ್ರೇಮ ಮಾಧುರ್ಯವನ್ನೂ, ದಾರ್ಶನಿಕತೆಯನ್ನೂ ಕೊಡಮಾಡಿವೆ. ಒಂದು ಭಾಷೆ ಮನುಷ್ಯ ಬದುಕಿನಿಂದಲೇ ರೂಪುಗೊಂಡು ಸಮೃದ್ಧವಾಗುತ್ತವೆ.
2008 ರ ಮೇ ತಿಂಗಳ ಕೊನೆಯಲ್ಲಿ ನನಗೆ ಸಫಿಯಾಳ ಭೇಟಿಯಾಯಿತು. ಹುಸ್ಸಾದ ಪುಟ್ಟ ರೆಸ್ಟೊರೆಂಟಿನ ಏಕಾಂತತೆಯಲ್ಲಿ ಸಫಿಯಾಳ ಭೇಟಿಯಾಗದಿರುತ್ತಿದ್ದರೆ ನಾನು ಈ ಕತೆ ಬರೆಯುತ್ತಿರಲಿಲ್ಲ. ಈ ಕತೆಯನ್ನು ತಿಳಿಯಲು ಮತ್ತು ಪ್ರೀತಿಯ ಓದುಗರಲ್ಲಿ ಹಂಚಿಕೊಳ್ಳಲೂ ಆಗುತ್ತಿರಲಿಲ್ಲ.
ಆಕಾಶದಿಂದ ಸಾವಿರಾರು ಕೀಲಿಗಳು ಇಳಿದುಬರುವ ಚಿತ್ರವನ್ನು ಊಹಿಸುವಿರಾ? ತುಕ್ಕು ಹಿಡಿದ ಆ ಪ್ರತಿಯೊಂದು ಕೀಲಿಗಳು ಪ್ರತಿರೋಧದ ಸಂಕೇತಗಳಾಗಿಯೂ, ಆತ್ಮರಕ್ಷಣೆಯ ಆಯುಧಗಳಾಗಿಯೂ ಆ ಸಂಜೆಯಲ್ಲಿ ನನಗೆ ಕಂಡಿತು. ದಶಕಗಳಿಂದ ನಾನು ಕೇಳಿ ತಿಳಿದುಕೊಂಡಿದ್ದ ಫೆಲೆಸ್ತೀನ್ ಆ ಕ್ಷಣದಿಂದ ನನ್ನ ಮನಸ್ಸಿನಲ್ಲಿ ಮೂರ್ತವಾಗತೊಡಗಿತು.

ಮೂವತ್ತು ವರ್ಷಗಳ ಹಿಂದೆ ಅಲ್- ಕೊಬಾರಿನ ಲೆಬನಾನ್ ಕಾರ್ಮಿಕ ಶಿಬಿರದಲ್ಲಿ ಭಾಗವಹಿಸಿದ್ದೆ. ಸುರಕ್ಷಿತ ನೆಲಕ್ಕಾಗಿ ನಾಡು ತ್ಯಜಿಸಿ ಹಲವು ದಿನಗಳಿಂದ ಅಲೆಯುತ್ತಿದ್ದ ಪ್ಯಾಲಸ್ತೀನಿಯರು ಎಲ್ಲೋ ನನ್ನ ಸ್ನೇಹಿತರ ಬಳಗವನ್ನು ಸೇರಿದ್ದರು. ಆವತ್ತು ನನ್ನ ಮನಸ್ಸಿನಲ್ಲಿ ಫೆಲೆಸ್ತೀನ್ ಇಷ್ಟು ಆಳವಾಗಿ ಬೇರೂರಿರಲಿಲ್ಲವೆಂಬ ಅಪರಾಧಿ ಪ್ರಜ್ಞೆಯಿಂದ ಬರೆಯುತ್ತಿದ್ದೇನೆ. ವಾಸ್ತವವನ್ನು ವಾಸ್ತವಕ್ಕಿಂತ ಗಾಢವಾಗಿ ಅನುಭವಿಸಲು ಕಲೆಯ ಅಗತ್ಯವಿದೆಯೆಂದು ನನಗೀಗ ಹೇಳಬೇಕೆನಿಸುತ್ತದೆ. ಇದನ್ನು ಮುಂದೆ ವಿವರಿಸುವೆ. ಪ್ಯಾಲೆಸ್ತೀನಿಯರೊಂದಿಗೆ ರಾತ್ರಿ ಉಪಹಾರ ಸೇವಿಸುತ್ತಿದ್ದಾಗ ನನ್ನ ಮನಸ್ಸು ವಾಸ್ತವವನ್ನು ಸರಳೀಕರಣಗೊಳಿಸಲು ಪ್ರಯತ್ನಿಸುತಿತ್ತು. ಅವರು ಬೆಂಕಿಯ ಸುತ್ತ ಕೂತು ನಿಶಬ್ಧರಾಗಿ ತಿನ್ನುತ್ತಿದ್ದರು. ಭೂತಕಾಲದ ನೆನಪುಗಳ ಬಿಗಿ ಹಿಡಿತದಲ್ಲಿ ಬಂಧಿಗಳಾಗಿದ್ದ ಅವರು ತಮ್ಮ ದೇಶವನ್ನು ಸ್ಮರಿಸಿಕೊಳ್ಳುತ್ತಿದ್ದರು. ಅವರು ಚಿಕ್ಕಂದಿನಲ್ಲಿ ತಿಂದು ರೂಢಿಯಾಗಿದ್ದ ಆಹಾರ ಪೇಯಗಳನ್ನೇ ಸೇವಿಸುತ್ತಿದ್ದರು. ಕೆಲವೊಮ್ಮೆ ತಮ್ಮ ಜನಪದ ಹಾಡುಗಳನ್ನು ಹಾಡಲು ಪ್ರಯತ್ನಿಸಿ ಸಾಲುಗಳು ಸಿಗದೇ ಚಡಪಡಿಸುತ್ತಿದ್ದರು. ಅವರನ್ನು ನನಗೆ ನತದೃಷ್ಟ ಜನತೆಯಂತೆ ತೋರಿತು. ಅವರು ಹೋರಾಟದ ಹಕ್ಕನ್ನು ದಮನಿಸಲ್ಪಟ್ಟಿರುವ ಮುಗ್ಧ ಸಮುದಾಯವಾಗಿದ್ದರು.
ಹಳೆಯ ಒಡಂಬಡಿಕೆಯನ್ನು ಅವರು ಎಲ್ಲೋ ಕಳೆದುಕೊಂಡಿದ್ದರು. ನನ್ನ ಈ ಅಭಿಪ್ರಾಯಕ್ಕೆ ವಿಚಿತ್ರ ಕಾರಣಗಳಿವೆ. ಇದು ಈ ಬರಹಕ್ಕೆ ಸಂಬಂಧಿಸಿದ ಸಂಗತಿಯಲ್ಲದಿದ್ದರೂ ಹೇಳದಿರಲಾಗದು. ಅಂದು ಪತ್ರಿಕೆಗಳಲ್ಲಿ ಫೆಲೆಸ್ತೀನ್ ತುಂಬಿರುತಿತ್ತು. ಒಂದರ ಹಿಂದೆ ಒಂದು ಸುದ್ದಿಗಳು ಬರುತ್ತಲೇ ಇದ್ದುವು. ಇಲ್ಲೇ ಅನೇಕ ಸಮಸ್ಯೆಗಳು ಸೃಷ್ಟಿಯಾಗುತಿತ್ತು. ನಾವು ಹೆಚ್ಚೆಚ್ಚು ಓದುತ್ತಾ ಹೋದಂತೆ, ಮಾಹಿತಿ ಸಿಗುವುದು ಕಡಿಮೆಯಾಗುತ್ತಾ ಬರುತ್ತದೆ. ಮಾಹಿತಿಗಳು ಪರಸ್ಪರ ಒರೆಸಿಕೊಂಡು ಸವೆದುಹೋಗಿರುತ್ತವೆ. ಈ ಅನುಸಂಧಾನ ಎಷ್ಟು ಪ್ರಸ್ತುತವೆಂದು ನನಗೆ ತಿಳಿದಿಲ್ಲ.

ನಾನು ಮತ್ತೆ ಸಫಿಯಾಳ ವಿಷಯಕ್ಕೆ ಬರುತ್ತೇನೆ. ವರ್ತಮಾನ ಜಗತ್ತಿನ ಹೋರಾಟ, ಚಳುವಳಿಗಳನ್ನು ಕುರಿತು ಆಳವಾಗಿ ಪರಿಶೀಲಿಸುವಾಗ ಮಹಿಳೆಯರು ಅದರ ಮುಖ್ಯ ಪಾತ್ರ ವಹಿಸುವುದಾಗಿ ಕಾಣುತ್ತದೆ. (ಈ ಕತೆಯಲ್ಲಿ ಸಫಿಯಾ ಧೀರೆ ನಾಯಕಿ). ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಬದುಕುಳಿಯುವ ಬಗೆಗಿನ ಆತಂಕ ಕಡಿಮೆ. ಮಹಿಳೆಯರು ಬದುಕಿನ ಕ್ರಿಯಾಶೀಲತೆ ಮತ್ತು ನಿರಂತರತೆಯ ಪ್ರತೀಕವೆಂದು ನನಗೂ ನಿಮಗೂ ತಿಳಿದಿರುವ ವಿಚಾರ. ಅವರನ್ನು ಪ್ರೀತಿಸುವ ಮತ್ತು ಆದರಿಸುವ ಸಮಾಜಕ್ಕೆ ಶಾಶ್ವತ ಬದುಕು ಇರುತ್ತದೆಯೆಂದು ನಾನು ತಿಳಿದಿದ್ದೇನೆ. ಇದೇ ಕಾರಣದಿಂದಲೇ ಈ ಶತಮಾನದ ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆಂದು ಮಾರ್ಕ್ವೆಝ್ ಹೇಳುತ್ತಾರೆ.

2008 ಮೇ ತಿಂಗಳ ಒಂದು ಸಿಹಿ‌ ಸಂಜೆ. ಇನ್ನೇನು ಬಿರುಗಾಳಿ ಬೀಸಲಿರುವ ಸೂಚನೆಯೆಂಬಂತೆ ಆಕಾಶ ದಟ್ಟ ಕಾರ್ಮೋಡಗಳಿಂದ ತುಂಬಿತ್ತು. ಆ ದಿನ ನಿರಂತರವಾಗಿ ಬಿರುಗಾಳಿ ‌ಬೀಸುತ್ತಲೂ, ಜೋರಾಗಿ ಮಳೆ ಸುರಿಯುತ್ತಲೂ ಇತ್ತು. ವಸಂತದ ಆಗಮನದ ಖುಷಿಯಲ್ಲಿ ಹೂ ಬಿಡುವ ಮರಗಳು ಹೂ ಉದುರಿಸಿ ನಗ್ನವಾಗಿ ನಿಂತಿದ್ದವು. ಆಕಾಶ ತಿಳಿಯಾದುದನ್ನು ಕಂಡು ನಾನು ಸವಾರಿ ಹೊರಟೆ. ಫೆಲೆಸ್ತೀನಿನ ಒಂದು ಪಾಕಶಾಲೆಯೊಳಗಿನ ತಂಪು ಹವೆಯಲ್ಲಿ ಏಕಾಂಗಿಯಾಗಿದ್ದೆ. ನಾವು ಅಮೇರಿಕನ್ ರೆಸ್ಟೊರೆಂಟ್‌ಗಳಲ್ಲಿ ಅನೇಕ ಬಾರಿ ಹೀಗೆ ಏಕಾಂಗಿತನ ಅನುಭವಿಸಿದ್ದೆವು. ಟೇಬಲ್ ಎದುರು ಕೂತು ತಿನ್ನುತ್ತಿದ್ದವರು ಏಳುವುದನ್ನೇ ಕಾದು, ಎದ್ದ ತಕ್ಷಣವೇ ಅಸಹನೆಯಿಂದ ಜಿಗಿದು ಕುರ್ಚಿ ನಮ್ಮದಾಗಿಸಿಕೊಳ್ಳುವ ಕಲೆ ನಮಗೆ ಕರಗತವಾಗಿತ್ತು.

ಆರ್ಡರ್ ಮಾಡಿ ಆಹಾರಕ್ಕಾಗಿ ಕಾಯುತ್ತಿರಬೇಕಾದರೆ, ಗಾಜಿನ ಬಾಗಿಲನ್ನು ಮೆಲ್ಲನೆ ಸರಿಸಿ ಒಳಗೆ ಇಣುಕಿತ್ತಿರುವ ಪುಟ್ಟ ಆಕೃತಿಯೊಂದು ಕಂಡಿತು. ಸಫಿಯಾ ಬಂದಿದ್ದಳು. ಗಾಜಿನ ಬಾಗಿಲು ಅರ್ಧ ತೆರೆದು ಆಕೆಯ ಮುಖ ಗೋಚರವಾಗುತ್ತಿದ್ದಂತೆ ನನ್ನ ಮನಸ್ಸು ನನಗರಿವಿಲ್ಲದೇ ತುಡಿಯತೊಡಗಿತು. ಆಕೆಯೊಬ್ಬಳು ಅರಬ್ ಸುಂದರಿ. ಅರ್ಧ ತೆರೆದ ಗಾಜಿನ ಬಾಗಿಲ ನಡುವೆ ಮೂಡಿದ ಮೋಹಕ ಮುಖ ಒಮ್ಮೆಯೂ ಮರೆಯಲಾಗದ ಮನೋಹರ ದೃಶ್ಯವಾಗಿತ್ತು. ಆಕೆ ಇಡೀ ಕೋಣೆಯನ್ನು ತನ್ನ ಕಣ್ಣಲ್ಲಿ ತುಂಬಿದಳು. ಖಾಲಿ ಬಿದ್ದಿದ್ದ ಟೇಬಲುಗಳನ್ನು ಉಪೇಕ್ಷಿಸಿ ನನ್ನತ್ತ ಧಾವಿಸಿದಳು. ನಮ್ರವಾಗಿ “ಇಲ್ಲಿ ಕುಳಿತುಕೊಳ್ಳಬಹುದೇ ?” ಎಂದಳು. ನಾನು ಮುಗುಳ್ನಕ್ಕು ಸಮ್ಮತಿ ಸೂಚಿಸಿದೆ. ಈ ಸಿಹಿ ಸಂಜೆಯಲ್ಲಿ ಸುಂದರಿಯೊಬ್ಬಳ ಜೊತೆ ಉಪಹಾರ ಸೇವಿಸುವ ಮಹಾಭಾಗ್ಯವನ್ನು ನಾನು ಯಾಕೆ ತಿರಸ್ಕರಿಸಲಿ.

ಆಕೆಗೆ ಏಕಾಂಗಿಯಾಗಿ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲವೆಂದೂ, ಉಪಹಾರ ಸೇವಿಸುವಾಗ ಯಾರೊಂದಿಗಾದರೂ ಮಾತಾನಾಡಲು ಬಯಸುತ್ತಾಳೆಂದೂ ನಾನು ಭಾವಿಸಿದೆ. ಇದು ಆಕೆ ತನ್ನನ್ನು ಜಗತ್ತಿಗೆ ಪರಿಚಯಿಸಿಕೊಳ್ಳುವ ಮತ್ತು ತನ್ನದೆಂಬ ಜಗತ್ತಿಲ್ಲದ ಆಕೆ ಜಗತ್ತನ್ನು ಹುಡುಕಿಕೊಳ್ಳುವ ಬಗೆಯಾಗಿರಬಹುದು. ಪರಿಚಯವಾಗುವುದಕ್ಕಿಂತ ಮುನ್ನ ಈ ರೀತಿಯಾಗಿ ಯೋಚಿಸುವ ಯಾವ ಹಕ್ಕೂ ನನಗಿಲ್ಲ. ಆದರೂ ಮನುಷ್ಯರ ಹೃದಯಗಳು ಅವರ ಮುಖದಲ್ಲಿ ಪ್ರಕಾಶಿಸುತ್ತವೆಯೆಂದು ನಾನು ನಂಬಿದ್ದೇನೆ. ಇದೇ ಕಾರಣಕ್ಕಾಗಿ ಅವರ ಕತೆಗಳನ್ನು ನನ್ನ ಕತೆಗಳಾಗಿ ಬರೆಯಬೇಕಾಗಿ ಬಂದಿದೆ.

ಒಬ್ಬ ಗಡ್ಡಧಾರಿಯನ್ನು ಭೇಟಿಯಾಗಲು ಸಿಕ್ಕಿದ್ದು ಆಕೆಗೆ ತೃಪ್ತಿಯಾಗಿರಬಹುದೆಂದು ನಾನು ಅಂದುಕೊಂಡೆ. ದೀರ್ಘ ನಿಟ್ಟುಸಿರಿನೊಂದಿಗೆ ಆಕೆ ಕುರ್ಚಿಯಲ್ಲಿ ಕುಳಿತಳು. ಕೈಯಲ್ಲಿದ್ದ ಉದ್ದನೆಯ ಕಾಗದದ ಕಟ್ಟನ್ನು ಟೇಬಲಿನ ಮೇಲಿಟ್ಟಳು. ನನಗೆ ಅದೇನೆಂದು ತಿಳಿಯುವ ಕುತೂಹಲವಿದ್ದಿದ್ದರೂ ನಾನು ತುಟಿ ಬಿಚ್ಚಲಿಲ್ಲ. ಆಕೆ ಮಡಿಲ ಮೇಲಿದ್ದ ಚೀಲದಿಂದ ಒಂದು ಪಾಕೇಟ್ ಪೇಪರ್, ಟವೆಲನ್ನು ಹೊರತೆಗೆದು ಕುತ್ತಿಗೆ, ಮುಖವನ್ನೆಲ್ಲಾ ಒರೆಸಿ ನನ್ನನ್ನು ವಿವರವಾಗಿ ನೋಡಿ ಮುಗುಳ್ನಕ್ಕಳು.
“ಭಾರತೀಯ ?”
“ಹೌದು. ಲೆಬನಾನ್ ?”
“ಅಲ್ಲ ಪ್ಯಾಲೆಸ್ಟೈನ್‌,”
ಆಕೆ ವಿಷದವಾಗಿ ಹೇಳತೊಡಗಿದಳು.
“ಒಬ್ಬ ಲೆಬನಾನಿಯೂ ಆ ಹೆಸರಿನಿಂದ ಕರೆಯಲು ಇಷ್ಟಪಡುವುದಿಲ್ಲ”. ಎಂದಳು.
ಅವರು ಲೆವೆಂಟ್‌ಗಳು. ಲೆವೆಂಟೈನ್ (Leventine). ಬೈಬಲ್‌ನಲ್ಲಿ ಉಲ್ಲೇಖಿಸಲಾದ ಲೆವೆಂಟೈನ್. ಶತಮಾನಗಳ ಕಾಲ ಆಳಿದ ಒಟ್ಟೋಮನ್ನರ ಆಡಳಿತ ಅವರನ್ನು ಲೆಬನಾನ್‌ಗಳನ್ನಾಗಿಸಿತು. ಅರೆ ! ಈಕೆ ನಾನು ಅಂದುಕೊಂಡಿರುವಂತೆ ಇಲ್ಲವಲ್ಲಾ ?.ಎಂದು ಅಚ್ಚರಿಯಾಯಿತು. ಇತಿಹಾಸದ ಆಳ-ಅಗಲದ ಜ್ಞಾನವಿಟ್ಟುಕೊಂಡೇ ನನ್ನ ಉಪಹಾರದ ಟೇಬಲ್ ಹಂಚಿಕೊಂಡಿದ್ದಳು. ಈ ಸಣ್ಣ ಮಾತುಕತೆಯ ನಡುವೆ ನಾವು ಎರಡು ಜಗತ್ತಿನಿಂದ ಒಂದೇ ಜಗತ್ತಿನಲ್ಲಿ ಬಂದು ನಿಂತಿದ್ದೆವು. ಆಕೆ ಇನ್ನೂ ತನ್ನ ಹೆಸರು ಹೇಳಿ ಪರಿಚಯಿಸಿಕೊಂಡಿರಲಿಲ್ಲ. ನಾನೂ ನನ್ನನ್ನು ಪರಿಚಯಿಸಿರಲಿಲ್ಲ.

ಓರೆನೋಟ ಬೀರುತ್ತಿದ್ದವಳು ತನ್ನ ಮೂಗಿನಿಂದ ಜಾರುತ್ತಿದ್ದ ಕನ್ನಡಕವನ್ನು ಬಲಗೈಯಿಂದ ಯಥಾ ಸ್ಥಳಕ್ಕೆ ತಂದು ಸರಿಪಡಿಸಿ ಕಿಸಕ್ಕನೆ ನಕ್ಕಳು. ನನಗೆ ಇಂತದ್ದೇ ಒಂದು ಚಿತ್ರ ಧುತ್ತನೇ ನೆನಪಿಗೆ ಬಂದಿತು. ಕೆಳಗೆ ಜಾರುವ ಕನ್ನಡಕವನ್ನು ಯಥಾ ಸ್ಥಳಕ್ಕೆ ತಂದು ಸರಿಪಡಿಸುವ ನನ್ನ ಮಗಳ ಚಿತ್ರ. ಇದರೊಂದಿಗೆ ಅಪರಿಚಿತತೆಯ ಎಲ್ಲಾ ಅದೃಶ್ಯ ಗೆರೆಗಳು ಕಣ್ಮರೆಯಾಯಿತು.

“ನಾನು ಸಫಿಯಾ. ಆಸ್ಮಿನ್ ವಿಶ್ವವಿದ್ಯಾಲಯದಲ್ಲಿ ಸೋಶಿಯಲ್ ಅಂತ್ರೋಪಾಲಜಿ ಕಲಿಯುತ್ತಿದ್ದೇನೆ. I am a victim of a forced exile. ನಾನು ದೇಶವಿಲ್ಲದವಳು. ದೇಶದಿಂದ ಬಲವಂತವಾಗಿ ಗಡಿಪಾರು ಮಾಡಲ್ಪಟ್ಟವಳು. ಯಾವುದೋ ದೇಶದಲ್ಲಿ ಅಲೆಯುತ್ತಿರುವ ತಾಯಿ, ತಂದೆ ಮತ್ತು ಒಡಹುಟ್ಟಿದವರನ್ನು ನೆನೆದು ವಿಲಾಪಿಸುವವಳು. ಇನ್ನು ಎಂದಾದರೂ ಅವರನ್ನು ಸೇರಬೇಕೆಂದು ತವಕಿಸುವವಳು.”

ಕೆಲವೇ ವಾಕ್ಯಗಳಲ್ಲಿ ಸಫಿಯಾ ಒಂದು ಜನತೆಯ ಇತಿಹಾಸ ಹೇಳಿ ಮುಗಿಸಿ ನನ್ನ ಮುಖಭಾವವನ್ನು ಅಳೆಯುತ್ತಾ ಕೂತಳು. ಆಕೆಯ ವರ್ತನೆ ಎಷ್ಟೊಂದು ಕುತೂಹಲಕಾರಿಯೆಂದು ಆಲೋಚಿಸುತ್ತಿದ್ದೆ. ಒಂದು ಹುಡುಗಿಗೆ ಇರಬೇಕಾದ ಮುಗ್ಧತೆಯಿಂದ ಆಕೆ ನಗುತ್ತಲೂ, ಏನು ಮಾಡಬೇಕೆಂದು ತೋಚದೆ ಕೈಗಳನ್ನು ಟೇಬಲ್ಲಿನ ಮೇಲಿಡುತ್ತಾ, ಬೆರಳುಗಳಿಂದ ಏನೇನೊ ಗೀಚುತ್ತಿದ್ದಳು. ಈ ನಡುವೆ ಆಕೆಯ ಮುಖ ಹಲವು ಬಾರಿ ನಿಷ್ಕಾರಣವಾಗಿ ಕೆಂಪೇರುತಿತ್ತು. ವೈಟರ್ ಅರ್ಡರ್ ಪಡೆಯಲು ಬಂದಾಗ ಆಕೆ ನಿಷ್ಕಳಂಕಳಾಗಿ ನನ್ನ ಮುಖ ನೋಡಿದಳು. ನಾನು ಆಗಲೇ ಆರ್ಡರ್ ಮಾಡಿಯಾಗಿತ್ತು. ನನಗೆ ಒಟ್ಟಿಗೆ ಕೂತು ತಿನ್ನಬಹುದೆಂದು ಅನ್ನಿಸಿತ್ತು. ಆದರೆ ಆಕೆಗೆ ಹಾಗೇ ಅನ್ನಿಸಿದೆಯೋ ಗೊತ್ತಾಗಿರಲಿಲ್ಲ. ನಾನಂತೂ ಒಟ್ಟಿಗೆ ತಿನ್ನಲು ತೀವ್ರವಾಗಿ ಆಸೆಪಟ್ಟೆ. ಆಕೆಯ ಮೇಲಿನ‌ ಸ್ನೇಹದಿಂದಲ್ಲ. ಆಕೆಯ ಸಂಕಟಗಳು ನನ್ನವೂ ಎನ್ನುವುದನ್ನು ಆಕೆಗೆ ಮನವರಿಕೆ ಮಾಡಿಕೊಡುವುದಕ್ಕಾಗಿತ್ತು. ನಾನು ಆರ್ಡರ್ ಮಾಡಿದ ಭಕ್ಷ್ಯಗಳು ಯಾವುದೆಂದು ಹೇಳಿದೆ. ತಮಗೆ ಇಷ್ಟವಿರುವ ಭಕ್ಷ್ಯಗಳನ್ನು ಆರ್ಡರ್ ಮಾಡಲು ವಿನಂತಿಸಿದೆ. ಒಟ್ಟಿಗೆ ಹಂಚಿಕೊಂಡು ತಿನ್ನೋಣವೇ ಎಂದೆ. ಆಕೆ ನಕ್ಕಳು. ವೈಟರ್ ಹೋದ ನಂತರ ಪಿಸುಮಾತಿನಲ್ಲಿ ” ಒಟ್ಟಿಗೆ ರೊಟ್ಟಿ ಹಂಚಿಕೊಂಡು ತಿನ್ನದೇ ಎಷ್ಟೋ ದಿನಗಳಾಗಿವೆ. ಮನುಷ್ಯರೊಂದಿಗೆ ರೊಟ್ಟಿ ಹಂಚಿಕೊಂಡಾಗ ಹೊಸ ಜಗತ್ತು ಸೃಷ್ಟಿಯಾಗುತ್ತದೆ. ಇಸ್ಲಾಂ ಹಂಚಿಕೊಂಡು ತಿನ್ನುವವರ ನಂಬಿಕೆಯ ಮೇಲೆ‌ ನಿಂತಿದೆ ಎಂದು ಮೌನಕ್ಕೆ ಜಾರಿ ಅನ್ಯಮನಸ್ಕಳಾದಳು. ಯಾವುದೋ ನೆನಪುಗಳಲ್ಲಿ ಆಕೆ ತನ್ನನ್ನು ಕಳೆದುಕೊಂಡಿದ್ದಳು. ನೆನಪಿನ ಲೋಕದಲ್ಲಿ ಮುಳುಗಿದ ಹೆಣ್ಣಿನ ಚಿತ್ರವೆ ಅತ್ಯಂತ ಕೌತುಕಮಯ ದೃಶ್ಯ ಎಂದು ನನಗೆ ಅನಿಸಲು ಶುರುವಾಯಿತು. ಇದ್ದಕ್ಕಿದ್ದಂತೆ ಆಕೆ ಯಾವುದೋ ತಪ್ಪು ಮಾಡಿದವಳಂತೆ ಎಚ್ಚೆತ್ತು ನನ್ನನ್ನು ನೋಡಿ ಮುಗುಳ್ನಕ್ಕಳು.

“ನನ್ನಮ್ಮನ ನೆನಪಿನ ಲೋಕಕ್ಕೆ ಲಗ್ಗೆಯಿಟ್ಟು ನಮ್ಮ ಮನೆ, ದೇಶವನ್ನೆಲ್ಲಾ ಕಂಡರಿತಿದ್ದೆ. ನನ್ನ ಪೀಳಿಗೆಯ ಎಲ್ಲಾ ಪ್ಯಾಲಸ್ತೀನಿಯರು ಅವರೆಂದಿಗೂ ಕಾಣದ ದೇಶವನ್ನು ಅನುಭವಗಮ್ಯವಾಗಿಸುವುದು ತಮ್ಮದಲ್ಲದ ನೆನಪುಗಳಿಂದಾಗಿರಬಹುದು. ಅಮ್ಮನ ದಿನಚರಿ ಡೈರಿಯಿಂದ ನಾನು ಅಮ್ಮನನ್ನು ಅರ್ಥಮಾಡಿಕೊಂಡಿದ್ದೆ. ಚಿಕ್ಕಂದಿನಿಂದಲ್ಲಿ ಸುರಕ್ಷಿತ ನೆಲಕ್ಕಾಗಿ ಅಲೆಯುತ್ತಿದ್ದಾಗ ಅಮ್ಮ ಆ ಡೈರಿಯನ್ನು ನನಗೆ ಹಸ್ತಾಂತರಿಸಿದ್ದರು. ಫೆಲೆಸ್ತೀನಿನ ಹಳ್ಳಿಯೊಂದರ ದಾಳಿಂಬೆ ತೋಟದ ನಡುವೆ ನಮಗೊಂದು ಮನೆಯಿತ್ತು.”

“ಇಂದು ಆ ಗ್ರಾಮ ಇಸ್ರೇಲಿಗೆ ಒಳಪಟ್ಟಿದೆ. ಇಂತಹ ಸಂಜೆಗಳಲ್ಲಿ ಅಂಗಳದಲ್ಲಿ‌ ಅಗ್ಗಿಷ್ಟಿಕೆ ಉರಿಯುತಿತ್ತು. ಅದರ ಮುಂದೆ ಒಂಟೆಯ ಚರ್ಮ ಹಾಸುತ್ತಿದ್ದರು. ಧೂಮಪಾನಕ್ಕಾಗಿ ಹುಕ್ಕಾ ಇರುತಿತ್ತು. ಹುಡುಗಿಯರು ಹುಕ್ಕಾ ತುಂಬುತ್ತಿದ್ದರು.”

ಆಕೆಯ ಮಾತು ಯಾವುದೋ ಲೋಕದಿಂದ ತೇಲಿ ಬರುತ್ತಿದ್ದ ಶಬ್ಧಗಳಂತೆ ಕೇಳಿಸುತ್ತಿದ್ದವು. ತಂಬಾಕಿನ ಹೊಗೆಯಿಂದ ಆಹ್ಲಾದವಾಗುತ್ತಿದ್ದ ಕಾಲಾತೀತ ಘಳಿಗೆಗಳಾಗಿತ್ತದು. ಆಕೆಯ ಮನಸ್ಸು ಸ್ವೇಚ್ಛೆಯಿಂದ ರೆಕ್ಕೆ ಬಿಚ್ಚಿ ಹಾರಾಡುತ್ತಿರುವುದು ನನಗೆ ಕಾಣುತ್ತಿತ್ತು. ಸಂಜೆಯ ಮಂದ ಬೆಳಕಿನಲ್ಲಿ ನಾವು ತಿನ್ನುತ್ತಿದ್ದೆವು. ಮಹಿಳೆಯರು ಬಿಸಿ ಬಿಸಿ ಜೋಳದ ರೊಟ್ಟಿಗಳನ್ನು ಕಾಯಿಸಿ ತೆಗೆದು ಬೋಗುಣಿಗೆ ಹಾಕುತ್ತಿದ್ದರು. ಜೋಳದ ರೊಟ್ಟಿಯೊಂದಿಗೆ ಗಿಣ್ಣು, ಒಲಿವ್ ಹಣ್ಣುಗಳು ಮತ್ತು ಖರ್ಜೂರ ಇರುತ್ತಿತ್ತು. ನನಗೊಮ್ಮೆಯೂ ಅದನ್ನು ಅನುಭವಿಸಲಾಗಿರಲಿಲ್ಲ. ಆದರೂ ‌ಆ ಕ್ಷಣವನ್ನು ನೆನಪಿನ ಸಂಚಿಯಲ್ಲಿ ಭದ್ರವಾಗಿರಿಸಿದ್ದೇನೆ.

ಉಪಹಾರದತ್ತ ಆಕೆ ತಲ್ಲೀನಳಾಗಿದ್ದಳು. ಪ್ರವಾಸಿಗಳಿಗೆ ಉಪಹಾರದ ನೆನಪುಗಳು ಜೀವನ ಪರ್ಯಂತ ಉಳಿಯುವಂತವು. ಅವರು ನಾಲಗೆಯಿಂದ ಸವಿಯಲಾರರು ಹೊರತು ಹೃದಯದಿಂದ ಸವಿಯುವರು. ಜೋಳ ರೊಟ್ಟಿ ಮುರಿಯುವ ಸದ್ದಿಗೆ ನಾನೂ ತಲ್ಲೀನನಾದೆ. ಮುರಿದ ಜೋಳ ರೊಟ್ಟಿಯ ಘಮಲು ಇಡೀ ಅಲ್ ಹುಸ್ಸ ಗ್ರಾಮವನ್ನು ಪಸರಿಸಿದ ಸಂಜೆಗಳು ನನಗೆ ನೆನಪಿವೆ. ಆಕೆ ಟೇಬಲ್ಲಿನ ಮೇಲಿದ್ದ ಕಾಗದ ಕಟ್ಟಿಗೆ ಮತ್ತೆ ಕೈಯಾಡಿಸಿದಳು. ನನ್ನ ಕಣ್ಣುಗಳಿಗೆ ಕುತೂಹಲ ಕೆರಳಿತು. ಅವಳು ಕಾಗದದ ಕಟ್ಟನ್ನು ಬಿಡಿಸಿ ನನ್ನ ಮುಖ ನೋಡಿದಳು. ಅದೊಂದು ಭಿತ್ತಿಪತ್ರವಾಗಿತ್ತು.

“ಅಲ್- ನಖ್ಬಾ” 60 ವರ್ಷಗಳಿಂದ ಬಲ ಪ್ರಯೋಗಿಸಿ ಗಡಿಪಾರು ಮಾಡಲ್ಪಟ್ಟ ಪ್ಯಾಲಸ್ತೀನಿಯರ ಇನ್ನೂ ಜೀವಂತವಾಗಿರುವ ಆತ್ಮವಿಶ್ವಾಸವನ್ನು ಪ್ರತಿನಿಧಿಸುವ ಪ್ರಣಾಳಿಕೆ. ನಾನು ಕೌತುಕದಿಂದ ಆ ಭಿತ್ತಿಪತ್ರಗಳನ್ನು ನೋಡುತ್ತಿದ್ದೆ‌. ನನಗೆ ಏನೊಂದೂ ಅರ್ಥವಾಗಲಿಲ್ಲ. ನೂರಾರು ಸಂಖ್ಯೆಯ ಪ್ಯಾರಚೂಟ್‌ಗಳು ಹಾರುತ್ತಿರುವ ಚಿತ್ರ ಕಂಡಿತು. ಪ್ರತೀ ಪ್ಯಾರಚೂಟಿನ ಮೇಲೆ ಅರಬಿಗಳ ಆಸ್ಮಿತೆಯನ್ನು ಸಾರುವ ಏನೋ ಒಂದು ಇದ್ದವು. ಮೊದಲು ಅದೇನೆಂದು ಅರ್ಥವಾಗಲಿಲ್ಲ. ನಂತರ ತಕ್ಷಣ ಅರಿವಾಯಿತು. ಈ ಪ್ಯಾರಾಚೂಟ್ ಅರಬಿಗಳ ಶಿರವಸ್ತ್ರ ‘ಕುಫಿಯಾ’ಗಳಾಗಿತ್ತು. ಕಪ್ಪು, ಬಿಳುಪಿನ ಚೌಕಗಳಿರುವ ಫೆಲೆಸ್ತೀನ್ ಕುಫಿಯಾಗಳು. ಕುಫಿಯಾಗಳನ್ನೇ ಪ್ಯಾರಾಚೂಟ್‌ಗಳನ್ನಾಗಿ ಹಾರಿಸಿ ಅದರೊಳಗೆ ಮನುಷ್ಯರ ಬದಲು ಕೀಲಿಕೈಗಳನ್ನು ಇಟ್ಟಿದ್ದರು. ಕೀಲಿಕೈಗಳು ನೂರಾರು ಸಂಖ್ಯೆಯಲ್ಲಿ ಆಕಾಶದಿಂದ ಜೇರುಸಲೆಮಿಗೆ ಇಳಿದುಬರುತಿತ್ತು. ನಗರ ಮತ್ತು ಹಳ್ಳಿಗಳಲ್ಲಿ ಅಲ್ಲಲ್ಲಿ ಬಿದ್ದಿದ್ದ ಅವಶೇಷಗಳ ಮೇಲೆ ಏನನ್ನೋ ಬರೆಯಲಾಗಿತ್ತು.

“ಅದು 1948 ರ ರಲ್ಲಿ ಇಸ್ರೇಲ್ ಆಕ್ರಮಣದ ಸಮಯದಲ್ಲಿ ನೆಲಸಮವಾಗಿದ್ದ ನಗರ ಮತ್ತು ಗ್ರಾಮಗಳ ಹೆಸರುಗಳು. ಅವುಗಳಲ್ಲಿ ನಮ್ಮ ಪೂರ್ವಜರ ಗ್ರಾಮವೂ ಇದೆ. ಅದರಲ್ಲಿ ಒಂದು ಕೀಲಿಕೈ ನನ್ನದು”. ಆಕೆ ಬ್ಯಾಗಿನೊಳಗಿಂದ ಒಂದು ತುಕ್ಕು ಹಿಡಿದಿದ್ದ ಕೀಲಿಕೈಯನ್ನು ಹೊರತೆಗೆದಳು. ಕೆಂಪು ರೇಷ್ಮೆಯ ಬಟ್ಟೆಯಿಂದ ಮಾಡಿದ್ದ ಸಣ್ಣ ಚೀಲದೊಳಗೆ ಕೀಲಿ ಕೈ ಮುದುಡಿ ಮಲಗಿತ್ತು. ಈ ಭಿತ್ತಿಪತ್ರಕ್ಕೆ ಸಂಘರ್ಷ ಭರಿತ ಪ್ರಣಯ ಕತೆಯ ಹಿನ್ನೆಲೆಯಿದೆ. ಈ ಚಿತ್ರವನ್ನು ಬರೆದದ್ದು ಅರಬಿಯಾಗಿರಲಿಲ್ಲ. ಹೊರತು, ಇಲ್ಡಿಕೊ ಥಾಟ್ ಎಂಬ ಹಂಗೇರಿಯನ್ ಮಹಿಳೆಯಾಗಿದ್ದಳು. ಆಕೆ ಹಂಗೇರಿಯಾದಿಂದ ಅಮೇರಿಕಾಗೆ ವಲಸೆ ಬಂದಿದ್ದಳು. ೩೪ ಪ್ರಾಯದ ಆಕೆ ಸಮೀರ್ ಎಂಬ ಫೆಲೆಸ್ತೀನ್- ಅಮೇರಿಕನ್ ಹುಡುಗಗನ್ನು ಅಂತರ್ಜಾಲದಲ್ಲಿ ಪರಿಚಯವಾಗಿ ಪ್ರೀತಿಸಿದಳು. ಆತ ನನ್ನ ಹಾಗೆಯೇ ಪ್ಯಾಲೆಸ್ಟೈನ್‌-ಅಮೆರಿಕನ್ ವಿಧ್ಯಾರ್ಥಿ. ಕಳೆದ ವರ್ಷದ ಮೇ ತಿಂಗಳ ಮೊದಲಲ್ಲಿ ಈಜಿಪ್ಟಿನ ಕೈರೋದಲ್ಲಿ ಅವರು ಮದುವೆಯಾದರು. ನೈಲ್ ನದಿಯಲ್ಲಿ ನೌಕಾ ಗೃಹದಲ್ಲಿ ಮಧುಚಂದ್ರ ಮುಗಿಸಿದರು. ನಂತರ ಹಂಗೇರಿಯಾದಲ್ಲಿ ಕೌಟುಂಬಿಕ ಬದುಕು ನಡೆಯಿತು. ಅವರು ಮತ್ತೆ ಒಂದಾಗುವುದಕ್ಕಾಗಿ ಎರಡು ದಾರಿಯಲ್ಲಿ ವಿರಮಿಸಿದರು. ಥಾಟ್ ಅಮೇರಿಕೆಗೆ, ಸಮೀರ್ ಫೆಲೆಸ್ತೀನಿಗೆ ತೆರಳಿದರು. ಸಮೀರ್‌ ಹೆತ್ತವರನ್ನು ಸಂದರ್ಶಿಸಿವುದಕ್ಕೆ ಹೋಗಿದ್ದ. ಆದರೆ ಸಮೀರ್‌ನಿಗೆ ಮತ್ತೆ ಅಮೇರಿಕೆಗೆ ಹಿಂದಿರುಗಲು ಆಗುವುದಿಲ್ಲ. ಅಮೇರಿಕೆಯ ಹೊಸ ಭಯೋತ್ಪಾದಕ ನಿಯಮಗಳು ಸಮೀರ್‌ನ ‘ನಖ್ಬಾ’ ಆಗಿ ಪರಿಣಮಿಸಿತು. ಇತ್ತ ಥಾಟ್‌ನ ‘ನಖ್ಬಾ’ ಆಗಿಯೂ ಪರಿಣಮಿಸಿತು. ಉರಿಯುವ ವಿರಹದ ಧಗೆಯಲ್ಲಿ ಥಾಟ್ ಈ ಚಿತ್ರ ಬರೆದಳು.

1948 ಮೇ 14 ರಂದು ಇಸ್ರೇಲ್ ರಾಷ್ಟ್ರವನ್ನು ರಚಿಸಲಾಯಿತು. ಪ್ಯಾಲೆಸ್ಟೈನ್‌‌ಗಳು ತಮ್ಮ ತಾಯಿ ನೆಲವನ್ನು ಕಳೆದುಕೊಂಡರು. ಝಿಯೋನಿಸ್ಟ್‌ಗಳು ಮೇ 2008 ರಲ್ಲಿ 60 ನೇ ” ಪುರಾತನ ಕನಸಿನ ಸಾಕ್ಷಾತ್ಕಾರ ” ಎಂಬ ಹೆಸರಿನಲ್ಲಿ ಆಚರಣೆ ನಡೆಸಿದ್ದರು. ಇದರ ವಿರುಧ್ದದ ಪ್ಯಾರಚ್ಯೂಟ್ ಆಕ್ರಮಣವಾಗಿತ್ತು ಥಾಟ್‌ಳ ಈ ಪೋಸ್ಟರ್.

ಇತಿಹಾಸದ ನಿಕೃಷ್ಟ ವಂಚನೆಗಳಲ್ಲಿ ಫೆಲೆಸ್ತೀನ್ ಇತಿಹಾಸವೂ ಒಂದು. ಬೈಬಲ್ ಪ್ರಕಾರ ಫೆಲೆಸ್ತೀನ್ ಪದದ ಅರ್ಥ ‘ಅಪರಿಚಿತರ ಮನೆ’ ಎಂದಾಗಿದೆ. ಒಂದು ಕಾಲದಲ್ಲಿ ಇದು ಅಪರಿಚಿತರ ದೇಶವಾಗಲಿದೆಯೆಂಬ ಭವಿಷ್ಯ ಬೈಬಲಿಗೆ ತಿಳಿದಿತ್ತೆನೋ. ಈ ಘೋರ ಅಪರಾಧದ ಹೊಣೆಗಾರಿಕೆಯಿಂದ ಕೈ ತೊಳೆದುಕೊಳ್ಳಲು ಅರಬಿಗಳಿಗೆ ಸಾಧ್ಯವಿಲ್ಲ. ಅದು ಅಸಹಾಯಕತೆಯಿಂದ ನಡೆದದ್ದು ಎಂದರೂ ಅದೊಂದು ಯೋಗ್ಯ ಸಮರ್ಥನೆಯಾಗುವುದಿಲ್ಲ.

1948 ರ ಮೇ ತಿಂಗಳು ಪ್ಯಾಲಸ್ತೀನಿಯರಿಗೆ ಎಂದಿಗೂ ಮರೆಯಲಾಗುವುದಿಲ್ಲ. ವಸತಿಗಳನ್ನು ಕಳೆದುಕೊಂಡು ಬರೀ ಕೀಲಿ ಕೈಗಳು ಮಾತ್ರ ಉಳಿದಿದ್ದ ಕ್ರೂರ ಮೇ ತಿಂಗಳು. ಇಸ್ರೇಲ್ ರಾಷ್ಟ್ರ ನಿರ್ಮಾಣದ ವಿರುಧ್ಧ ‘ಅರಬ್ ವಿಮೋಚನಾ ಸೇನೆ’ ಶಕ್ತವಾಗಿ ಹೋರಾಟ ನಡೆಸಿತ್ತು. ವಿಮೋಚನಾ ಸೇನೆ ಫೆಲೆಸ್ತೀನ್ ಗ್ರಾಮಸ್ಥರೊಂದಿಗೆ ಲೆಬನಾನ್, ಜೋರ್ಡಾನ್, ಸಿರಿಯಾದಲ್ಲಿ ನಿರ್ಮಿಸಲಾದ ನಿರಾಶ್ರಿತರ ಕೇಂದ್ರಗಳಿಗೆ ತೆರಳುವಂತೆ ಒತ್ತಾಯಿಸಿತು. ಪ್ಯಾಲಸ್ತೀನಿಯರನ್ನು ಝಿಯೋನಿಸ್ಟ್‌ಗಳು ಕೊಲ್ಲುವುದರಿಂದ ತಪ್ಪಿಸಿಕೊಳ್ಳುವುದಕ್ಕೆಂದು ಈ ಉಪಾಯ ಮಾಡಿದ್ದರು. ಅದು ಎರಡು ಮೂರು ವಾರಗಳ ನಂತರ ಮತ್ತೆ ಹಿಂದಿರುಗುವ ಪಲಾಯನವಾಗಿತ್ತು. ಮೋಸೆಸ್ ಮತ್ತು ಮೋಸೆಸ್‌ನ ಅನುಯಾಯಿಗಳು ಎಂದಿಗೂ ಹಿಂದಿರುಗದ ಯಾತ್ರೆಗೆ ಸಿದ್ಧರಾಗಿ ಹೊರಟಿದ್ದರು. ಒಂದು ಸಾವಿರ ವರ್ಷಗಳ ನಂತರ ಪ್ಯಾಲಸ್ತೀನಿಯರು ಹಿಂದಿರುಗುತ್ತಾರೆಂಬ ನಿರೀಕ್ಷೆಯಲ್ಲಿ ನಾಡು ತ್ಯಜಿಸಿದರು. ಅಗತ್ಯದ ಸಣ್ಣ ವಸ್ತುಗಳನ್ನು ಗಂಟು ಕಟ್ಟಿ ಸುರಕ್ಷಿತವಾಗಿ ಮನೆಗೆ ಬೀಗ ಜಡಿದು ಒಂದು ಇಡೀ ಜನತೆ ಕೀಲಿ ಕೈಗಳೊಂದಿಗೆ ಫೆಲೆಸ್ತೀನಿನ ಸೀಮೆ ದಾಟಿತು. ಅವರು ಎಂದೆಂದಿಗೂ ಮರಳಿ ಬಾರದ ಯಾತ್ರೆಗೆ ಹೊರಟ್ಟಿದ್ದೇವೆಂದು ಭಾವಿಸಿರಲಿಲ್ಲ. ವಿಮೋಚನಾ ಸೇನೆಯ ಕೋರಿಕೆಯನ್ನು ನಡೆಸಿಕೊಟ್ಟು ಪ್ಯಾಲಸ್ತೀನಿಯರು ಇತಿಹಾಸದ ಅತಿ ಮೂರ್ತಖನವನ್ನು ತೋರಿಸಿದ್ದರು.

ಕೆಲವು ದಿನಗಳ ದೇಶಾಂತರ 60 ವರ್ಷಗಳನ್ನು ದಾಟಿ ಇಂದಿಗೂ ಮುಂದುವರಿಯುತ್ತಲಿದೆ‌. ಗೊತ್ತು ಪರಿಚಯವಿಲ್ಲದ ದೇಶದಲ್ಲಿರುವ ತಾತ್ಕಾಲಿಕ ವಸತಿಗಳನ್ನು ಬಿಟ್ಟು ತಮ್ಮ ತಾಯಿನೆಲಕ್ಕೆ ಮರಳಲು ಕಾತರಿಸಿ ಎಷ್ಟೊ ಆಯಸ್ಸುಗಳು ಮುಗಿದಿವೆ. ಬಹುಶ ಇದು ಒಮ್ಮೆಯೂ ಮುಗಿಯದ ಕಾಯುವಿಕೆ.

ಪ್ಯಾಲಸ್ತೀನಿಯರು 60 ವರ್ಷಗಳ ನಂತರವೂ ಆ ಕೀಲಿ ಕೈಗಳನ್ನು ಜತನದಿಂದ ಕಾಪಾಡಿಕೊಳ್ಳುತ್ತಿದ್ದಾರೆ. ಮರಳಿಬರುವುದಕ್ಕೆಂದು ಸುರಕ್ಷಿತವಾಗಿ ಬೀಗ ಜಡಿದಿದ್ದ ಅದೇ ಕೀಲಿ ಕೈಗಳು. ಒಂದು ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ಸ್ಥಳಾಂತರವಾಗುವಾಗಲೂ ಆ ಕೀಲಿ ಕೈಗಳನ್ನು ಒಯ್ಯುತ್ತಾರೆ. ಇನ್ನೆಂದಿಗೂ ಆ ಪುರಾತನ ಮನೆಗಳನ್ನು ತೆರೆಯಲಾಗುವುದಿಲ್ಲವೆಂಬ ವಾಸ್ತವ ತಿಳಿದಿದ್ದರೂ ಆ ಕೀಲಿ ಕೈಗಳು ಮಾತ್ರ ಅವರಲ್ಲಿ ಜೋಪಾನವಾಗಿವೆ.

ಭರವಸೆ ಮತ್ತು ಅದರ ಉಲ್ಲಂಘನೆಯ ಸ್ಮಾರಕಗಳಂತೆ ನನಗೆ ಆ ಕೀಲಿ ಕೈಗಳು ಕಂಡವು. ಸಫಿಯಾಳನ್ನು ಭೇಟಿಯಾಗುವ ಮೊದಲು ಕೀಲಿ ಕೈಗಳು ಅಧಿಕಾರದ ಚಿಹ್ನೆಯೆಂದುಕೊಂಡಿದ್ದೆ. ಆದರೆ ಇಲ್ಲಿ ಕೀಲಿ ಕೈಗಳು ಹೋರಾಟದ ಸಂಕೇತಗಳಾಗಿ ಮಾರ್ಪಾಡಾಗಿದ್ದವು. ಒಂದು ಚಿಹ್ನೆ ವಿಭಿನ್ನ ಸಂಧರ್ಭದಲ್ಲಿ ರೂಪಾಂತರಗೊಳ್ಳುವ ಬಗೆಯನ್ನು ನಾನು ಅರಿತೆ. ವಿಲೋಮಗಳಾಗಿ ಕಾಣುವ ವಸ್ತುಗಳು ಕೆಲವೊಮ್ಮೆ ಹೋರಾಟದ ಆಯುಧಗಳಾಗಿಯೂ ಬದಲಾಗಬಹುದು. ಕೀಲಿ ಕೈಗಳಾಗಿತ್ತು ಥಾಟ್ ಬರೆದ ಚಿತ್ರವಾಗಿ ಕುಫಿಯಾದಲ್ಲಿ ಹಾರಾಡುತ್ತಿದ್ದುದು.

ಉಪಹಾರ ಮುಗಿಸಿ ಪರಸ್ಪರ ಬೀಳ್ಕೊಡುವಾಗ ಸಫಿಯಾ ಕೆಂಪು ಬಟ್ಟೆಯ ಚೀಲದೊಳಗಿಂದ ಕೀಲಿ ಕೈಯನ್ನು ತೆಗೆದು ನನ್ನ ಕೈಗಿತ್ತಳು. ನನ್ನ ಅಂಗೈಯಲ್ಲಿ ಆ ಕೀಲಿ ಕೈ ಹೊತ್ತಿ ಉರಿಯುತ್ತಿರುವಂತೆ ಭಾಸವಾಯಿತು. ಆ ಕೀಲಿ ಕೈಯಲ್ಲಿ ಮಾನವ ಚರಿತ್ರೆಯ ಭಾರ ಹುದುಗಿತ್ತು. ಆಕೆ ಬೆರಳುಗಳಿಂದ ನನ್ನ ಕೈಯಲ್ಲಿದ್ದ ಕೀಲಿ ಕೈಯನ್ನು ತೆಗೆದು ಮತ್ತೆ ಕೆಂಪು ಚೀಲದೊಳಗಿಟ್ಟಳು. ನಂತರ ವಿಷಣ್ಣ ನಗು ಬೀರಿ ಕತ್ತಲಾವರಿಸಿದ್ದ ಬೀದಿಗೆ ಇಳಿದಳು. ಆಕೆ ಹಿಂದಿರುಗಿ ನೋಡದೇ ಸರಸರನೆ ನಡೆದು ಮಾಯವಾದಳು. ಕಳೆದು ಹೋಗಿದ್ದ ಕೀಲಿ ಕೈಗಳು ನನ್ನನ್ನು ಕಾಡಿದ್ದವು. ಆದರೆ ಇದೇ ಮೊದಲ ಬಾರಿ ಕಳೆದುಹೋಗದೇ ಉಳಿದಿದ್ದ ಕೀಲಿ ಕೈ ಕಾಡತೊಡಗಿದ್ದವು.

ಬಾಬು ಭಾರದ್ವಾಜ್
ಅನುವಾದ : ಮುಹಮ್ಮದ್ ಝೈನುದ್ದೀನ್ ಇನೋಳಿ


ಬಾಬು ಭಾರದ್ವಾಜ್ (1948-2016)

ಇವರು ಮಲಯಾಳಂ ಸಾಹಿತಿ ಮತ್ತು ಪತ್ರಕರ್ತರು. ಸಿವಿಲ್ ಇಂಜಿನಿಯರ್, ಲೇಖಕ, ಪತ್ರಕರ್ತ, ನಿರ್ಮಾಪಕ, ದೂರದರ್ಶನ ಮುಖ್ಯಸ್ಥ ಹೀಗೆ ಅನೇಕ ವೃತಿಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು. ಪ್ರವಾಸಿಯುಡೆ ಕುರಿಪ್ಪುಕಲ್, ಕಲಾಪಂಗಲ್ಕೊರು ಗ್ರಿಹಪದಂ ಪ್ರಮುಖ ಕೃತಿಗಳು. ಇವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಬುಧಾಬಿ ಶಕ್ತಿ ಪ್ರಶಸ್ತಿ ಲಭಿಸಿವೆ.

1 Comment

  1. ಅನುವಾದದ ಭಾಷೆ ವಿಷಯದಷ್ಟೇ ಇಷ್ಟವಾಯ್ತು.
    ಅಭಿನಂದನೆ .

Leave a Reply

*