ಜನಪ್ರಿಯತೆಯ ತೆವಲು : ಹೊಸತಲೆಮಾರಿಗೆ ಅಂಟಿಕೊಂಡ ಸೋಂಕು

ನಾವು ಈ ಸಾಲಿನ ಪವಿತ್ರ ರಂಝಾನ್ ತಿಂಗಳಿನಲ್ಲಿದ್ದೇವೆ. ಈ ರಂಝಾನ್ ನಮಗೆ ಆತ್ಮ ನಿಯಂತ್ರಣ ಹಾಗೂ ಕ್ಷಮೆಯ ಕುರಿತಾಗಿ ಹಲವು ರೀತಿಯಲ್ಲಿ ಬೋಧಿಸುತ್ತಿದೆ. ಹೀಗಾಗಿ ರಂಝಾನ್ ಎಂಬುವುದು ಕೇವಲ ಆಹಾರವನ್ನು ಬಿಟ್ಟು ಕೂರುವುದು ಮಾತ್ರವಲ್ಲದೆ ಒಂದು ರೀತಿಯ ಆತ್ಮಾವಲೋಕನ ಹಾಗೂ ಧ್ಯಾನವಾಗಿದೆ. ಸತ್ಯ ವಿಶ್ವಾಸಿಗಳನ್ನು ಆಂತರಿಕವಾಗಿ ಬಲಹೀನಗೊಳಿಸುವುದರ ಜೊತೆಗೆ ಬಾಹ್ಯ ಪ್ರಚೋದನೆಗಳಿಗೂ ಈ ಪವಿತ್ರ ಮಾಸ ತಡೆಯೊಡ್ಡಲಿದೆ. ಅಂದರೆ, ಈ ಮಾಹೆಯಲ್ಲಿ ಕೆಡುಕುಗಳು ಇಲಾಹನ ಬಂಧನದಲ್ಲಿರಲಿದೆ. ಇದು ಮನುಷ್ಯ ತನ್ನ ಯೋಚನೆಯನ್ನು ಸರಿ ದಾರಿಗೆ ಎಳೆಯಲು ಸೂಕ್ತ ಸಮಯವಾಗಿರಲಿದೆ.

ಜನರು ಇತರರಿಂದ ಹೊಗಳಿಸಿಕೊಳ್ಳಲು ಹಪಹಪಿಸುತ್ತಿರುವುದು ನನ್ನ ಪ್ರಕಾರ ಈ ತಲೆಮಾರಿಗೆ ಅಂಟಿಕೊಂಡಿರುವ ಮಾರಕ ಕಾಯಿಲೆಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯನ್ನು ನಾವು ಹೆಚ್ಚೆಚ್ಚು ಕಾಣುತ್ತಿದ್ದೇವೆ. ತಮ್ಮೆಲ್ಲಾ ಯೋಚನೆಗಳನ್ನು ಈ ಒಂದಕ್ಕೇ ಕೇಂದ್ರೀಕರಿಸಿಕೊಂಡು, ಸಮಾಜದಲ್ಲಿ ತಾನೊಬ್ಬ ದೈವಿಕ ಶಕ್ತಿಯುಳ್ಳವನೆಂಬುವುದನ್ನು ಸಾಬೀತು ಪಡಿಸಲು ಇವರು ಹೆಣಗಾಡುತ್ತಿದ್ದಾರೆ. ಇಂಥವರು ಹೊಗಳಿಕೆಯಲ್ಲೇ ಆತ್ಮಸಂತೃಪ್ತಿ ಕಂಡುಕೊಳ್ಳುತ್ತಾರೆ. ಇದು ಬಹಳ ಅಪಾಯಕಾರಿ ಬೆಳವಣಿಗೆ.

ನಮ್ಮ ನಡುವೆ ವಿವಿಧ ರೀತಿಯ ಜನರಿದ್ದಾರೆ. ಮನುಷ್ಯ ಸಂಕುಲದ ವೈವಿಧ್ಯತೆಯನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ನಾವು ನಮ್ಮ ಗುಣನಡೆತೆಯನ್ನು ರೂಪಿಸಿಕೊಳ್ಳಬೇಕು. ಹೀಗಾಗಿ ನಾವು ನಮ್ಮ ಮಿತಿಯನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಾವು ಹೊಗಳಿಕೆಯ ದಾಸರಾಗಬಾರದು. ಇಂಥಹ ವಿಷಯಗಳ ಕುರಿತು ಪ್ರಸ್ತಾಪಿಸುತ್ತಾ ಮೊಹಮ್ಮದ್ ﷺ ಅವರು ಹೇಳಿದ್ದು ಹೀಗೆ. “ನಾನು ಜನರ ಸ್ಥಿತಿಗತಿ ನೋಡಿಕೊಂಡು ಅವರೊಡನೆ ವ್ಯವಹರಿಸಲು ಆಜ್ಞಾಪಿಸಲ್ಪಟ್ಟವನಾಗಿದ್ದೇನೆ.” ಹೀಗಾಗಿ ಓರ್ವ ಸಾಮಾನ್ಯನ ಜೊತೆಗೆ ಹಾಗೂ ವಿದ್ವಾಂಸನ ಜೊತೆಗೆ ಸಮಾಲೋಚಿಸುವಾಗ ಅವರಿಬ್ಬರ ಜ್ಞಾನದ ನೆಲಗಟ್ಟಿನಲ್ಲಿ ಇಬ್ಬರಿಗೂ ಅನುಗುಣವಾಗುವಂತೆ ನಾವು ನಡೆದುಕೊಳ್ಳಬೇಕು. ತಮ್ಮೊಳಗಿನ ಪಾಂಡಿತ್ಯದ ತೋರಿಕೆಗಾಗಿ ಎಲ್ಲವನ್ನು ಎಲ್ಲರ ಮುಂದೆಯೂ ಉರು ಹೊಡೆಯಬಾರದು. ಇದು ಪ್ರಾಯೋಗಿಕವಾಗಿ ಓರ್ವನಿಗೆ ಇರಬೇಕಾದ ಸಾಮಾನ್ಯ ಜ್ಞಾನ. ಇದೆಲ್ಲವನ್ನು ಮರೆತು ಹೊಗಳಿಕೆಗಾಗಿ ನಾವು ಮಾಡುವ ಅರ್ಥಹೀನ ಕೆಲಸಗಳು ಒಳಿತನ ಮೌಲ್ಯಕ್ಕೆ ವಿರುದ್ಧವಾದಂತದ್ದು.

ಈ ಸಮೂಹ ನಮ್ಮ ಬಗ್ಗೆ ಏನು ಹೇಳುತ್ತಿದೆ, ನಮ್ಮ ಕುರಿತಾಗಿ ಏನು ಮಾತನಾಡುತ್ತಿದೆ ಎಂಬುವುದನ್ನೆಲ್ಲಾ ತಿಳಿದುಕೊಳ್ಳಲು ಹುಟ್ಟುವ ಉತ್ಸುಕತೆ ಈ ಆಧುನಿಕ ಜಗತ್ತಿನಲ್ಲಿ ಕಾಣಸಿಗುವ ಮಾರಕ ಕಾಯಿಲೆಗಳ ಪೈಕಿ ಇರುವಂತವು. ಇತ್ತೀಚಿನ ದಿನಗಳಲ್ಲಿ ನೀವೂ ಗಮನಿಸರಬಹುದು. ಲೈಕು, ಕಮೆಂಟುಗಳ ರಾಶಿಗಾಗಿ ಹದಿಹರೆಯದ ಯುವಕರು ಯೂಟ್ಯೂಬ್‍ಗಳಲ್ಲಿ ನಡೆಸುವ ಹೆಣಗಾಟವನ್ನು, ಅಲ್ಲಿ ಅವರಿಗೆ ಬರುವ ಲೈಕು ಕಮೆಂಟುಗಳೇ ಅವರು ಮನುಷ್ಯರಾಗಿ ಬದುಕುತ್ತಿದ್ದಾರೆ ಎಂಬುವುದಕ್ಕಿರುವ ಮಾನದಂಡ ಎಂದು ಅವರು ಭಾವಿಸಿದ್ದಾರೆ. ಒಂದು ಹಂತದ ಬಳಿಕ ಅಂಥಾ ಪ್ರಶಂಸೆಗಳು, ಹೊಗಳಿಕೆಗಳು ಅವರಿಗೆ ಸಿಗದೆ ಹೋದರೆ ಅವರು ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಇಂಥಾ ಬೆಳವಣಿಗೆಗಳು ಜೀವನ ಪ್ರೀತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಇಂಥಾ ವಿಷಯಗಳ ಕುರಿತು ಇಸ್ಲಾಂ ತಾಳ್ಮೆ ಮತ್ತು ನಮ್ರತೆಯನ್ನು ಕಾಯ್ದುಕೊಳ್ಳಲು ಹೇಳುತ್ತದೆ. ಇವುಗಳ ಕುರಿತು ಪೈಗಂಬರರು ಹೇಳುತ್ತಾರೆ “ಎಲ್ಲಾ ಧರ್ಮಗಳಿಗೂ ಅದರದ್ದೇ ಆದ ಗುಣ ವಿಶೇಷಗಳಿವೆ. ಆದರೆ ಇಸ್ಲಾಂ ಮುಂದಿಡುವ ಮೌಲ್ಯ ಲಜ್ಜೆ ಮತ್ತು ನಮ್ರತೆಯಾಗಿದೆ. ಸದ್ಯ ಯುವ ಸಮೂಹ ಅನುಸರಿಸಿಕೊಂಡು ಬರುತ್ತಿರುವ ಲೌಕಿಕ ಮೌಲ್ಯ ಹಾಗೂ ಮಹತ್ವಾಕಾಂಕ್ಷೆಗಳನ್ನು ಪ್ರವಾದಿಗಳು ಹದೀಸ್ ಮೂಲಕ ತೀವ್ರವಾಗಿ ಖಂಡಿಸಿದ್ದಾರೆ. “ತೋರಿಕೆ ಹಾಗೂ ಮಹತ್ವಾಕಾಂಕ್ಷೆಗಳ ಕುರಿತಾಗಿ ನನ್ನ ಸಮುದಾಯ ತಾಳಬಹುದಾದ ನಿಲುವುಗಳ ಬಗ್ಗೆ ನನ್ನಲ್ಲಿ ಭಯವಿದೆ” ಎಂದು ಇಬ್ನುಮಾಜ (ರ) ಅವರು ವರದಿ ಮಾಡಿದ ಹದೀಸ್‍ವೊಂದರಲ್ಲಿ ಪೈಗಂಬರರು ಹೇಳುತ್ತಾರೆ. ಈ ತೋರಿಕೆ ಎಂಬುವುದು ದೈವನಿಂದನೆ ಎಂದು ಪ್ರವಾದಿಗಳು ಬೋಧಿಸುತ್ತಾರೆ. ಯಾಕೆಂದರೆ, ಅವರು ಸರ್ವಶಕ್ತನಾದ ಅಲ್ಲಾಹನಿಂದ ಸಿಗಬೇಕಾದ ಮಾನ್ಯತೆಯನ್ನು ಅವನದ್ದೇ ಸೃಷ್ಟಿಗಳಿಂದ ಎದುರು ನೋಡುವವರಾಗಿದ್ದಾರೆ.

ಯಕಶ್ಚಿತ್,ನಮ್ಮ ಪೂರ್ವಜರೆಲ್ಲರೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರಿಂದ ಹಿಂದೆ ಸರಿಯುತ್ತಿದ್ದವರು. ಹೀಗಿದ್ದ ಪಂಡಿತರಲ್ಲೊಬ್ಬರಾಗಿದ್ದರು ಖಾಲಿದ್ ಬಿನ್ ಮಹ್ದಾನ್ (ರ). ಮುಹಮ್ಮದ್ ﷺ ಅವರ ಸುನ್ನತ್ತ್ ಅನ್ನು ಕಾಪಾಡುವ ನಿಟ್ಟಿನಲ್ಲಿ ಅದ್‍ಹಾಂ ಎಂಬ ಹದೀಸ್ ಪಂಡಿತ, ತನ್ನ ಪಾಂಡಿತ್ಯದಿಂದ ತನಗೆಲ್ಲಿ ಪ್ರಸಿದ್ಧಿ ಬಂದು ಬಿಡುತ್ತದೋ ಎಂಬ ಭಯದಿಂದ ಹದೀಸ್ ಕೂಟದಿಂದಲೇ ಎದ್ದು ನಡೆಯುತ್ತಿದ್ದರು.

ಇದೇ ವಿಷಯದ ಕುರಿತು ಮತ್ತೊಂದು ಘಟನೆ ನೆನಪಿಸಿಕೊಳ್ಳುವುದಾದರೆ, ಉಬಯ್ ಬಿನ್ ಕಅಬ್ (ರ) ಅವರು ಹೀಗೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಅಬ್ (ರ) ಅವರ ಅನುಯಾಯಿಗಳು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನು ನೋಡಿದ ಉಮರ್ (ರ) ತನ್ನ ಕೈಯಲ್ಲಿದ್ದ ಕೋಲು ಉಬಯ್ ಬಿನ್ ಕಅಬ್ (ರ) ಅವರ ನೇರಕ್ಕೆ ಹಿಡಿದು ನಿಂತು ಬಿಟ್ಟರು. ತಮ್ಮ ನೇರಕ್ಕೆ ಕೋಲು ಹಿಡಿದು ನಿಂತಿರುವ ಉಮರ್ (ರ) ಅವರ ಬಳಿ ಏನಾಯ್ತು ತಂಙಳೇ ಎಂದು ಕಅಬ್ (ರ)ರವರು ಕೇಳಿದರು. ಇದಕ್ಕೆ ಉತ್ತರಿಸಿದ ಉಮರ್ (ರ), ಈ ರೀತಿಯ ನಡಿಗೆ ಅನುಯಾಯಿಗಳಿಗೆ ನ್ಯೂನ್ಯತೆಯೂ ಹಾಗೂ ಅದನ್ನು ನಾಯಕರಿಗೆ ಅಪಾಯವೂ ಆಗಿದೆ ಎಂದರು.

ನಮ್ಮ ಪೂರ್ವಜರು ಈ ರೀತಿಯಾದ ಶ್ರದ್ಧೆ ಮತ್ತು ಭಕ್ತಿಯಿಂದ, ತೋರಿಕೆ ಹಾಗೂ ಖ್ಯಾತಿಯ ಪೊರೆಯನ್ನು ಕಳಚಿ ಬಿಟ್ಟವರು ಎಂದು ನಾವುಗಳು ಅರ್ಥೈಸಿಕೊಳ್ಳಬೇಕು. ಯಾಕೆಂದರೆ, ಇಂಥಾ ಜನಪ್ರಿಯತೆಯ ತೆವಲು ಅವರನ್ನು ದೈವನಿಂದನೆಯೆಡೆಗೆ ಕೊಂಡೊಯ್ಯಲಿದೆ ಎಂದು ಅವರು ಭಾವಿಸಿದ್ದರು. ಹೀಗೆ ಮಾಡಿದವರಲ್ಲಿ ಕೆಲವರು ತಮ್ಮ ಪಾಂಡಿತ್ಯ ತೋರದಿರಲು ಹಲವು ದಾರಿಗಳನ್ನು ಕಂಡುಕೊಂಡಿದ್ದರು. ಎಲ್ಲಿಯವರೆಗೆ ಎಂದರೆ ನೀರಿಗೆ ಮದ್ಯಕ್ಕೆ ಹೋಲುವ ಕಲಬೆರಕೆಯನ್ನು ಮಿಶ್ರಣ ಮಾಡಿ ಜನರ ಮುಂದೆ ಕೂತು ಕುಡಿಯುತ್ತಿದ್ದರು. ಇದರಿಂದ ತಮ್ಮ ಮೇಲೆ ಜನರಿಗೆ ಅಭಿಮಾನ ಮೂಡದಿರಲಿ ಹಾಗೂ ಖ್ಯಾತಿ ದಕ್ಕದಿರಲಿ ಎಂದು ಈ ರೀತಿ ನಡೆದುಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ತೋರಿಕೆ ಮತ್ತು ಪ್ರಸಿದ್ಧಿಯನ್ನು ವಿರೋಧಿಸುತ್ತಿದ್ದರು. ಆದರೆ ವಿದ್ವಾಂಸರ ಪ್ರಕಾರ, ಈ ರೀತಿಯಲ್ಲೂ ಖ್ಯಾತಿಯನ್ನು ತಿರಸ್ಕರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪಂಡಿತರ ಈ ರೀತಿಯ ಗುಣ ನಡೆತೆಗಳು ಅನುಯಾಯಿಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ತಮ್ಮ ನಂಬಿಕೆಗಳು ಅನುಯಾಯಿಗಳ ಮೇಲೆ ನಕಾರಾತ್ಮಕ ರೀತಿಯಲ್ಲಿ ಪ್ರಭಾವ ಬೀರುವುದಿಲ್ಲವೆಂದಾದರೆ ಮಾತ್ರ ಇಂಥಾ ಕಠಿಣ ಆಚರಣೆಗಳಿಗೆ ಇಸ್ಲಾಂ ಸಮ್ಮತಿಸುತ್ತದೆ.

ಇದೇ ಮಾದರಿಯ ಮತ್ತೊಂದು ಘಟನೆಯನ್ನು ತಾರೀಖ್‍ನಿಂದ (ಇತಿಹಾಸದಿಂದ) ನೆನಪಿಸಿಕೊಳ್ಳುವುದಾದರೆ, ಒಟೋಮನ್ ಸಾಮ್ರಾಜ್ಯದ ಆದಿ ರಾಜಧಾನಿಯಾಗಿದ್ದ ಬುರ್ಸ ಎಂಬಲ್ಲಿನ ಮುಖ್ಯ ಮುಫ್ತಿ ಹಾಗೂ ಒಟೋಮನ್ ರಾಜರ ಆಡಳಿತ ಸಲಹೆಗಾರ ಮತ್ತು ಪ್ರಮುಖ ವ್ಯಕ್ತಿಗಳಲ್ಲೊಬ್ಬನಾಗಿದ್ದ ಅಝೀಜ್ ಮುಹಮ್ಮದ್ ಹುದೈ, ಆಧ್ಯಾತ್ಮಿಕವಾಗಿ ಓರ್ವ ಶೈಖ್ (ಹಿಂದಿನ ಅರಬ್ ಬುಡಕಟ್ಟು ಜನಾಂಗದ ನಾಯಕರನ್ನು ಶೈಖ್ ಎಂದು ಕರೆಯಲಾಗುತ್ತಿತ್ತು. ಈಗಲೂ ಅದೇ ಪದ ಚಾಲ್ತಿಯಲ್ಲಿದೆ. ಆದರೆ ಬುಡಕಟ್ಟು ಎಂಬ ಪ್ರಾತಿನಿಧ್ಯ ಆ ಪದ ಸದ್ಯಕ್ಕೆ ತೋರುವುದಿಲ್ಲ. ಆದರೆ ಇಲ್ಲಿ ಅಝೀಜ್ ಮುಹಮ್ಮದ್ ಹುದೈ ಹಿಂಬಾಲಿಸಿದ್ದು ಬುಡಕಟ್ಟು ಜನಾಂಗದ ನಾಯಕನ್ನು) ಅವರನ್ನು ಹಿಂಬಾಲಿಸಲು ತೀರ್ಮಾನಿಸುತ್ತಾನೆ. ಇದನ್ನು ಅರಿತ ಶೈಖ್, ತಲೆಗೆ ದೊಡ್ಡದಾದ ಪೇಟ, ವಿಶೇಷ ಬಟ್ಟೆಯನ್ನು ಧರಿಸಿ ರಾಜರೊಡನೆ ಅಹಂಕಾರದೊಂದಿಗೆ ತಿರುಗುತ್ತಿದ್ದ ಮುಫ್ತಿಯನ್ನು ಪರೀಕ್ಷಿಸಲು ತೀರ್ಮಾನಿಸಿದರು. ಮರುಕ್ಷಣವೇ ಮುಫ್ತಿಯನ್ನು ಕರೆದು, ನೀನು ನನ್ನ ಶಿಷ್ಯನಾಗ ಬಯಸುವೆಯಾದರೆ ನೀನು ಧರಿಸಿರುವ ಇದೇ ಬಟ್ಟೆಯಲ್ಲಿ ಮಾರುಕಟ್ಟೆಗೆ ತೆರಳಿ ಕರುಳು (ಮಾಂಸ ಎಂದು ಅರ್ಥೈಸಿಕೊಳ್ಳಬಹುದು) ವ್ಯಾಪಾರ ಮಾಡಬೇಕು ಎಂದು ಶೈಖ್ ಸವಾಲೊಡ್ಡಿದರು. ಅಷ್ಟೇ ಅಲ್ಲದೆ ಮಾಂಸ ಮಾರಟಗಾರ. ಮಾಂಸ ಮಾರಾಟಗಾರ ಎಂದು ಜೋರಾಗಿ ಕೂಗಿ ಹೇಳಬೇಕು ಎಂದರು. ಇದು ಕೇಳುತ್ತಿದ್ದಂತೆ ಮುಫ್ತಿ ಹೌಹಾರಿ ಹೋದರು. ಮುಫ್ತಿಯ ಅಹಂಕಾರ ಇಳಿಸಲು ಶೈಖ್ ನೀಡಿದ ಮೊದಲ ಪಾಠವಾಗಿತ್ತದು. ಇಷ್ಟಾದರೂ ಶೈಖ್ ಅವರ ಸವಾಲನ್ನು ಸ್ವೀಕರಿಸಿ ಹೇಳಿದಂತೆಯೇ ಮುಫ್ತಿ ಮಾಡಿದರು. ಈ ಘಟನೆ ಬಳಿಕ ಶೈಖ್ ಮುಫ್ತಿಯನ್ನು ಶಿಷ್ಯನೆಂದು ಮನಸಾರೆ ಒಪ್ಪಿಕೊಂಡರು. ಮುಫ್ತಿ ಶೈಖ್ ರಿಂದ ತಾಳ್ಮೆ ಮತ್ತು ಸಹಾನುಭೂತಿಯ ಪಾಠವನ್ನು ಕಲಿತುಕೊಂಡರು. ತದನಂತರದ ದಿನಗಳಲ್ಲಿ ಒಟೋಮನ್ ಸಾಮ್ರಾಜ್ಯದ ಪ್ರಧಾನಿಯಾಗಿದ್ದ ಅಝೀಜ್ ಮುಹಮ್ಮದ್ ಹುದೈ ಮುಫ್ತಿ ಜನರ ನಡುವೆ ಹೆಚ್ಚು ಸ್ವೀಕೃತಗೊಂಡ ವ್ಯಕ್ತಿತ್ವವಾಗಿ ರೂಪುಗೊಂಡರು.

ನಾವು ಮಾಡುವ ಕೆಲಸಗಳಿಂದ ನಾವು ಅಹಂಕಾರ ಪಟ್ಟುಕೊಳ್ಳಬಾರದು, ಗರ್ವ ಪಟ್ಟುಕೊಳ್ಳಬಾರದು. ಮುಹಮ್ಮದ್ ﷺ ಹೇಳುತ್ತಾರೆ, “ಯಾರಾದರು ಒಬ್ಬರು ನಿಮ್ಮೆಡೆಗೆ ಬೆರಳು ತೋರಿದರೆ ಸಾಕು ಅದೇ ನಿಮ್ಮಲ್ಲಿರುವ ದುಷ್ಟತನಕ್ಕಿರುವ ಸಾಕ್ಷ್ಯ.” ಹೀಗಾಗಿ ಈ ಪವಿತ್ರ ತಿಂಗಳಲ್ಲಿ ನಮ್ಮನ್ನು ಎಲ್ಲಾ ರೀತಿಯಾದ ಬಾಹ್ಯ ಪ್ರಚೋದನೆಗಳಿಂದ ಆ ಸೃಷ್ಟಿಕರ್ತನು ಕಾಪಾಡಲಿ. ನಮ್ಮ ಯೋಚನೆಗಳು ಹಾಗೂ ಹೃದಯಗಳು ಈ ಮೂಲಕ ಶುದ್ಧೀಕರಣಗೊಳ್ಳಲಿ.

(ಇದು ಶೈಖ್ ಅಬ್ದುಲ್ ಹಕೀಂ ಮುರಾದ್ ನಡೆಸಿಕೊಡುವ Ramdhan moment ಎಂಬ ಸರಣಿಯಲ್ಲಿ Seeking status ಎಂಬ ಒಕ್ಕಣೆಯಲ್ಲಿ ಮಾಡಿದ ಭಾಷಣದ ಲಿಖಿತ ರೂಪ)

ಕನ್ನಡಕ್ಕೆ : ಆಶಿಕ್ ಮುಲ್ಕಿ


SHYKH ABDUL HAKIM MURAD

Dean of Cambridge Muslim College in the United Kingdom, was educated at Cambridge, Al Azhar, and the Free University of Amsterdam. He is currently University Lecturer in Islamic Studies in the Faculty of Divinity at Cambridge University.

2 Comments

  1. ಜನಪ್ರಿಯತೆ ಎಂಬ ಪದಕ್ಕಿಂತ ಪ್ರಚಾರಪ್ರಿಯತೆಯ ಗೀಳು ಎಂಬ ಪದ ಸೂಕ್ತವಾಗುತ್ತಿತ್ತು

Leave a Reply

*