ನಶಾ ಪಿಲಾ ಕೆ ಗಿರಾನಾ ಸಬ್ಕೊ ಆತಾ ಹೈ
ಮಝಾ ತೊ ತಬ್ ಹೈ ಗಿರ್ತೋಂಕೋ ಥಾಮ್ ಲೆ ಸಾಕಿ !
– ಅಲ್ಲಾಮ ಇಕ್ಬಾಲ್
ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ,
ಖುಷಿಯಿರುವುದು ಬಿದ್ದವನ ಎತ್ತಿ
ಗಮ್ಯ ಸೇರಿಸುವುದರಲ್ಲಿ, ಸಾಕಿ!
– ಪುನೀತ್ ಅಪ್ಪು
ಬಹಳಷ್ಟು ದಿನಗಳ ಕಾಲ ಈ ಸಾಲನ್ನು ಗುನುಗಿಕೊಳ್ಳುತ್ತಾ ಓಡಾಡುತ್ತಿದ್ದೆ. ಅದು ಕೊಡುವ ಎನರ್ಜಿಯ ಸುಖ ವಿಚಿತ್ರ. ಈ ಸಾಲಲ್ಲಿ ಅಂತದ್ದೇನಿದೆ ಎನ್ನಬಹುದು. ಸಾರಾಂಶ ಹೇಳುತ್ತಾ ಕೂತರೆ ತೀರಾ ಸಾಮಾನ್ಯ ಅನಿಸಬಹುದು. ಆದರೆ, ಕವಿಯೊಬ್ಬನ ಬದ್ಧತೆ, ಸಾಹಿತ್ಯದ ಶ್ರೇಷ್ಟತೆಯ ದೃಷ್ಟಿಕೋನದಿಂದ ನೋಡಿದಾಗ ಬಹಳ ಅದ್ಭುತ ಸಾಲುಗಳು ಇವು.
ಕವಿ ತೀವ್ರವಾದ ವೈಯಕ್ತಿಕ ಭಾವನೆಗಳನ್ನು ಕವಿತೆಯಾಗಿಸುತ್ತಾನೆ. ಆ ಕವಿತೆ ಶ್ರೇಷ್ಠವಾಗುವುದು ಅದು ವೈಯಕ್ತಿಕತೆಯನ್ನು ಮೀರಿ ಸಾರ್ವತ್ರಿಕ ಗುಣ ಪಡೆದುಕೊಂಡಾಗ. ಅರ್ಥಾತ್ ಎಲ್ಲರ ಅನುಭವವಾದಾಗ. `ಕಾವ್ಯವು ತೀವ್ರವಾದ ಭಾವನೆಗಳ ಸಹಜ ಹರಿವು’ ಎಂದು ಲಿರಿಕಲ್ ಬ್ಯಾಲಡ್ ಗೆ ಮುನ್ನುಡಿ ಬರೆಯುತ್ತಾ ವಿಲಿಯಮ್ ವರ್ಡ್ಸ್ ವರ್ಥ್ ಹೇಳುತ್ತಾನೆ.
ಮಹಾಕವಿ ಅಲ್ಲಾಮ ಇಕ್ಬಾಲರ ಬಹುತೇಕ ಕವಿತೆಗಳು ಈ ಗುಣವನ್ನು ಪಡೆದುಕೊಂಡಿದೆ. ಈ ಮೇಲಿನ ಸಾಲುಗಳನ್ನೇ ನೋಡಿ, ದೇಶಕಾಲಗಳನ್ನು ಮೀರಿ ಯಾರೂ ಬೇಕಾದರೂ ಇದು ನನ್ನದೇ ಸಾಲು ಅಥವಾ ಅನುಭವ ಎನ್ನವಷ್ಟು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಗುಣವನ್ನು ಹೊಂದಿದೆ. ಇಕ್ಬಾಲರ ಪ್ರತಿಭೆ ಅದು. ಕವಿಗೆ ವೈಯಕ್ತಿಕವಾಗಿ ಏನೋ ನೋವಿದೆ. ಅದು ಅವರನ್ನು ತೀವ್ರವಾಗಿ ಕಾಡಿರಬೇಕು. ಆದ್ದರಿಂದಲೇ ಅದು burning bright ತರದ ಕವಿತೆಯಾಗಿ ಮೈತಳೆದಿದೆ. ಆದರೆ, ಆ ನೋವು ತನ್ನೊಬ್ಬನದ್ದೇ ಅಲ್ಲ; ಬಹು ಜನರದ್ದು ಎಂಬ ಅರಿವೂ ಕವಿಗಿದೆ. ಆತ ಅದನ್ನು ಶೋಧಿಸಿಕೊಳ್ಳುತ್ತಾನೆ. ಇಲ್ಲಿ ನೋವಿದೆ, ದೂರಿದೆ. ಹೊಯ್ದಾಟವಿದೆ. ಆದರೆ, ಅಷ್ಟಕ್ಕೇ ಮುಗಿದಿದ್ದರೆ ಈ ಸಾಲು ಸಪ್ಪೆ ಎನಿಸಿಬಿಡುತ್ತಿತ್ತು. ತೀರಾ ಸಾಮಾನ್ಯ ಎಂಬ ಷರಾ ಪಡೆದು ಕಸದ ಬುಟ್ಟಿ ಸೇರುತ್ತಿತ್ತು. ಕವಿ ನೋವನ್ನು ಮೀರುವ, ಆರೋಪವನ್ನು ನೀಗಿಸಿಕೊಳ್ಳುವ ವಿಶೇಷ ಪ್ರಯತ್ನವನ್ನು ಕವಿತೆಯಲ್ಲೇ ಮಾಡುತ್ತಾನೆ. ಬದುಕನ್ನು ಪ್ರೀತಿಸುತ್ತಾನೆ. ಬದುಕುವವರಿಗೆ positive energy ಕೊಡುತ್ತಾನೆ. ಖುಷಿಯ ಮೂಲದ ಹುಡುಕಾಟ ನಡೆಸುತ್ತಾನೆ.
ಎಲ್ಲಿದೆ ಖುಷಿ?
ಅಧಿಕಾರದಲ್ಲಿ? ಶ್ರೀಮಂತಿಕೆಯಲ್ಲಿ? ಖ್ಯಾತಿಯಲ್ಲಿ? No way. ಖುಷಿಯಿರುವುದು ಬದುಕಿನ ಸಣ್ಣ ಪುಟ್ಟ ಸಂಗತಿಗಳನ್ನು ಆಪ್ತತೆಯಿಂದ ಅನುಭವಿಸುವುದರಲ್ಲಿ. ಬಿದ್ದವನ ಎತ್ತಿ ಗುರಿ ಮುಟ್ಟಿಸುವಂತಹ ಪರೋಪಕಾರಗಳಲ್ಲಿ. ಖಿನ್ನತೆ ಕಾಡಿದಾಗಲೆಲ್ಲಾ ನಾನು ಈ ಈ ಸಾಲನ್ನು ಜೋರಾಗಿ ಓದಿಕೊಳ್ಳುತ್ತೇನೆ. ಅದು ನೀಡುವ ಆನಂದ, ಸಾಂತ್ವನ ಅನುಭವಿಸಿಯೇ ತಿಳಿಯಬೇಕು. ಇಕ್ಬಾಲರ ಕವಿತೆಗಳನ್ನು ಓದಲು ಉರ್ದು ಅರ್ಥವಾಗಲೇಬೇಕಿಲ್ಲ. ಅರ್ಥ ಬೇಕೇ ಬೇಕು ಎಂದೆನಿಸಿದಾಗ ನನ್ನ ಮಟ್ಟಿಗೆ ಪುನಿತ್ ಅಪ್ಪು ಇದ್ದಾರೆ. ಅವರ ಫೇಸ್ಬುಕ್ ಗೋಡೆಗೆ ಹೋದರೆ ಅಲ್ಲಿ ಇಕ್ಬಾಲರ ಬಹಳಷ್ಟು ಕವಿತೆಗಳು ಸಿಗುತ್ತವೆ. ಇಕ್ಬಾಲರ, ಗಾಲಿಬರ ಅನೇಕ ಕವಿತೆಗಳನ್ನು ಕನ್ನಡಕ್ಕೆ ತರುವ ಮಹತ್ವದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಅನುವಾದವನ್ನು ಓದುವುದೇ ಒಂದು ಚಂದ. ಈ ಮೇಲೆ ಉಲ್ಲೇಖಿಸಿದ ಸಾಲಿನ ಭಾವಾನುವಾದವೂ ಅವರದ್ದೇ. ಇಕ್ಬಾಲರ ಕವನಗಳನ್ನು ತಮ್ಮದೇ ಸ್ವಂತ ಕವಿತೆ ಎಂಬಷ್ಟು ಆಪ್ತವಾಗಿ ಕನ್ನಡೀಕರಿಸುವ ಛಾತಿ ಅವರಿಗಿದೆ.
ಈ ನಡುವೆ `ಮತ್ತೇರಿಸಿದ ಮೇಲೆ ದೂಡಿ ಹಾಕುವವರೇ ಎಲ್ಲಾ..’ ಎಂದರೇನೆಂದು ಯೋಚಿಸುತ್ತಿದ್ದೆ. ಉರ್ದು, ಪರ್ಷಿಯನ್ ಕವಿತೆಗಳಲ್ಲೇಕೆ `ಶರಾಬು’, ‘ಮತ್ತು’, ‘ಮಧುಪಾತ್ರೆ’ ಮೊದಲಾದ ರೂಪಕಗಳು ಪದೇ ಪದೇ ಬಂದು ಕಾಡುತ್ತವೆ? `ಮರಣವೆಂಬ ಮಧುಸುರಿಯುವವನಿಂದ ಬೆಳಗಿನ ಮಧು ಕುಡಿಯುವ ಕರ್ಮ!'(ಅನುವಾದ: ಪುನೀತ್ ಅಪ್ಪು) ಎಂಬುದು ಇಕ್ಬಾಲರ ಇನ್ನೊಂದು ಕವಿತೆಯ ಸಾಲು. ಇಲ್ಲಿ ಕವಿಗೆ ಮರಣವೇ ಮಧು! ಅವರ ‘ಮೋಟಾರು’ ಕವನದಲ್ಲಿ `ಕೆಂಡದೊಳಗಿಂದ ಧಗಧಗವಾಗಿ
ಮಧುಪಾತ್ರೆಯೂ ಸಾಗಿದರು ಕೂಡ/ಮಧುಬಟ್ಟಲಿನಿಂದ ಸುರೆ / ಹರಿಯುತಿರುವ ವೈಖರಿಯೇ ಮೌನ’! ಎಂದು ಮೌನಕ್ಕೂ ಸುರೆಗೂ ತಳುಕು ಹಾಕಲಾಗಿದೆ. ಸೂಫಿಗಳಿಗೆ ಮೌನವೇ ಒಂದು ಸುರೆ ಎಂದು ಯೋಚಿಸುವಾಗ ಏನೇನೋ ಹೊಳೆಯುತ್ತದೆ. ಆದರೆ, ಇಲ್ಲಿ ಭಾವನೆಗಳಲ್ಲಿ ಕುದಿತವಿದೆ. ಕೆಂಡವಿದೆ. ಧಗಧಗವಿದೆ. ಆನಂತರ ಮಧು ಬಟ್ಟಲಿನಿಂದ ಸುರೆ ಹರಿಯುತ್ತದೆ. ಮೌನ ಒಡಮೂಡುತ್ತದೆ.
ಗಾಲಿಬ್‌ನ ಕವಿತೆಗಳುದ್ದಕ್ಕೂ ಮಧು, ಮಧು ಬಟ್ಟಲು ಕಾಣಿಸಿಕೊಳ್ಳುತ್ತದೆ. ಅಗಲಬೇಕೆಂಬ ಇರಾದೆಯಿದ್ದೂ, ಅಗಲಲಾರದ ಸಖಿಯ ರೂಪಕವೇ ಮಧು, ಶರಾಬು ಇತ್ಯಾದಿ? ಪ್ರೇಮದ ಆತ್ಯಂತಿಕ ಸ್ಥಿತಿಯನ್ನು ವರ್ಣಿಸಲಾಗದ ಅಸಹಾಯಕತೆಯಲ್ಲಿ ‘ಮತ್ತು’ ಅಂದುಬಿಟ್ಟರೆ ಉರ್ದು ಕವಿಗಳು? ಅಥವಾ ಕುಡುಕನೊಬ್ಬ ಮಧುಬಟ್ಟಲ ಮುಂದೆ ಪ್ರಜ್ಞೆ ಕಳೆದುಕೊಳ್ಳುವಂತೆ ಭಕ್ತಿಯ ನಶೆಯಲ್ಲಿ ತಾನು ದೇವನ ಮುಂದೆ ಪ್ರಜ್ಞಾಹೀನನಾಗಿರುವ ಸ್ಥಿತಿಯನ್ನು ಶರಾಬಿನ ರೂಪಕದ ಮೂಲಕ ಕವಿ ಹೇಳುತ್ತಿದ್ದಾನೆಯೇ? ಗೊತ್ತಿಲ್ಲ. ಕವಿತೆಗಳಲ್ಲಿ ಸಾಮಾನ್ಯ ಪದವೂ ವಿಶೇಷ ಅರ್ಥವನ್ನು ಕೊಡಬಲ್ಲುದು. ಹಾಗೆಯೇ, ವಿಶೇಷ ಪದಗಳೂ ಸಾಮಾನ್ಯ ಅರ್ಥವನ್ನು ಕೊಡಬಹುದು. ಕವಿತೆಯೆಂದರೆ, ಬದುಕಿನ ತಿರುಗು ಮುರುಗು ಕನ್ನಡಿ. ಆ ಕನ್ನಡಿಯೊಳಗೆ ಕಾಣುವುದೆಲ್ಲವೂ ಅರ್ಥವಾಗಬೇಕೆಂದಿಲ್ಲ. ಬದುಕನ್ನೇ ಅರ್ಥ ಮಾಡಿಕೊಳ್ಳುವುದು ಕಷ್ಟವಾದಾಗ ಅದರ ಪ್ರತಿಬಿಂಬವಾದ ಕವಿತೆಯನ್ನು ಅರ್ಥ ಮಾಡಿಕೊಳ್ಳಲೇಬೇಕೆಂಬ ಹಠವೇಕೇ? ತೀವ್ರ ಭಾವನೆಗಳ ಸಹಜ ಹರಿವು ಕವಿತೆಯೆಂದಾಗ, ಅರ್ಥವೂ ಸಹಜವಾಗಿ ದಕ್ಕಬೇಕಲ್ಲ ಎಂದು ನನ್ನ ಕವಿ ಗೆಳೆಯ ಕೇಳುತ್ತಾನೆ. ಅವನ ಮಾತನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಿಲ್ಲ. ಮತ್ತೆ ಮತ್ತೆ ಓದಿಕೊಂಡು ಕವಿತೆಯ ಬಿಲದೊಳಗೆ ಅರ್ಥದ ಇಲಿಯನ್ನು ಹುಡುಕುವುದು ತಪ್ಪೇನಲ್ಲ.
ರೂಮಿಯ ಕವಿತೆಗಳನ್ನು ಓದುವಾಗ ಹೀಗಾಗುತ್ತದೆ. ಅಲ್ಲಿ ಅರ್ಥದ ಹುಡುಕಾಟ ಎಂಬುದು ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬ ಇಲಿಗಳ ಜೀವನ್ಮರಣದ ಪ್ರಶ್ನೆಯಷ್ಟೇ ಕಷ್ಟಕರವಾದುದು.
“ಕಳೆದ ರಾತ್ರಿ ಗುರುವಿನೊಡನೆ ಬೇಡಿದೆ,
ಜಗತ್ತಿನ ಆ ಮಹಾರಹಸ್ಯವನ್ನು ಅರುಹು,
ಆತ ಮೆಲ್ಲನೇ, ಅತೀ ಮೆಲ್ಲನೇ ಪಿಸುಗುಟ್ಟಿದ,
ಶ್ಶ್…! ಸುಮ್ಮನಿರು, ಮಹಾರಹಸ್ಯವನ್ನು
ಹೇಳಲಾಗದು, ಅದನ್ನು ಮೌನದಲ್ಲಿ ಸುತ್ತಿಡಲಾಗಿದೆ!”(ರೂಮಿ: ಅನುವಾದ ಪುನೀತ್ ಅಪ್ಪು). ಈ ಸಾಲುಗಳ ಅರ್ಥವೇನೆಂದು ಬಹಳಷ್ಟು ದಿನಗಳಿಂದ ಯೋಚಿಸುತ್ತಿರುವೆ. ಮಹಾರಹಸ್ಯ ಎಂದ ಮೇಲೆ ಅದನ್ನು ಯಾಕೆ ಹೇಳಬೇಕು? ಹೇಳಿದರೆ ಅದು ‘ರಹಸ್ಯ’ವೆಂಬ ತನ್ನ ಅತ್ಯಮೂಲ್ಯ ಗುಣವನ್ನು ಕಳೆದುಕೊಳ್ಳುವುದಿಲ್ಲವೇ? ಅನ್ನೋದು ಕವಿಯ ಭಾವವಾಗಿರಬಹುದು. ನನಗೆ ರೋಮಾಂಚನವಾಗಿದ್ದು, ‘ಮೌನದಲ್ಲಿ ಸುತ್ತಿಡಲಾಗಿದೆ’ ಎಂಬ ರೂಮಿಯ ಅದ್ಭುತ ರೂಪಕವನ್ನು ಓದಿದಾಗ. ಮಹಾರಹಸ್ಯ ಮತ್ತು ಮೌನ ಎರಡು ಕೂಡ ಭಾಷೆಗೆ ಅತೀತವಾದುದು. ಈ ಸಾಲುಗಳು ಎಷ್ಟು ನಾಟಕೀಯವಾಗಿದೆ ಎಂದರೆ, ಗುರುವಿನ ಉತ್ತರ ನೋಡಿ; ಅಂತಹ ಪ್ರಶ್ನೆಗಳನ್ನು ಕೇಳಕೂಡದು. ಯಾಕೆಂದರೆ, ಅದಕ್ಕೆ ಉತ್ತರವಿಲ್ಲ. ಶಿಷ್ಯನ ಪ್ರಶ್ನೆ ಕೇಳಿ ಗುರು ಆಘಾತಕ್ಕೊಳಗಾಗುತ್ತಾನೆ. ‘ಶ್..ಸುಮ್ಮನಿರು’ ಎಂದು ಗದರಿಸುತ್ತಾನೆ. ಆನಂತರ ಪ್ರೀತಿಪೂರ್ವಕವಾಗಿ ಆತನನ್ನು ತನ್ನ ಸಮೀಪಕ್ಕೆ ಆಹ್ವಾನಿಸಿ, ಗುಟ್ಟು ಹೇಳುವವನಂತೆ, ಪಿಸುಗುಟ್ಟಿ ಒಂದು ಸತ್ಯವನ್ನು ಹೇಳುತ್ತಾನೆ. ಅದನ್ನು ಹೀಗೆ ಹೇಳಬಹುದು; ‘ಮಹಾ ರಹಸ್ಯವನ್ನು ಮಾತಿನಲ್ಲಿ ಹುಡುಕಬೇಡ. ಅದು ಮೌನದ ಗರ್ಭದಲ್ಲಿ ಅಡಗಿದೆ. ಅದನ್ನು ನೀನು ಮೌನದಲ್ಲೇ ಹುಡುಕಬೇಕು. ಧ್ಯಾನ ಮಾಡಬೇಕು. ಸಾಧನೆಗಳಲ್ಲಿ ಮುಳುಗಬೇಕು. ತಪಸ್ವಿಯಾಗಬೇಕು. ಆ ಮಹಾ ರಹಸ್ಯದ ಜೊತೆಗೆ ಮೌನದ ಮೂಲಕ ತಾದಾತ್ಮ ್ಯವನ್ನು ಸಾಧಿಸಿಕೊಳ್ಳಬೇಕು. ಆ ಮಹಾ ರಹಸ್ಯದ ಜೊತೆ ಪ್ರೇಮದಲ್ಲಿ ಒಂದಾಗಬೇಕು’ ಹೀಗೆ ಏನೇನೋ ಹೊಳೆಯುತ್ತದೆ. ಶ್ರೇಷ್ಠ ಕಾವ್ಯಗಳು ಮಾತ್ರ ಇಂತಹ ಸಂಗತಿಗಳನ್ನು ಹೇಳಬಲ್ಲುದು.
ಹಾಗೆ ನೋಡಿದರೆ, ಅರ್ಥದ ಬೇಲಿಯನ್ನು ದಾಟಿ ಇಶ್ಖನ್ನು ನಶೆಯ ಮಟ್ಟಕ್ಕೆ ಏರಿಸಿದವರು ಸೂಫಿ ಕವಿಗಳು. ಅವರು ಪರಿತ್ಯಕ್ತ, ಭಕ್ತಿಯ, ಪ್ರೇಮದ ನಶೆಯಲ್ಲಿ ಹೇಳಿದ್ದನ್ನು ಓದೋದು ಎಷ್ಟು ಚಂದ! ಆದರೆ, ಅರಗಿಸಿಕೊಳ್ಳೋದು ಎಷ್ಟು ಕಷ್ಟ! ಆದ್ದರಿಂದಲೇ ಕವಿಗಳು ಬದುಕಿನ ಕನ್ನಡಿಯನ್ನು ತಲೆ ಕೆಳಗು ಮಾಡಿ ನೋಡುತ್ತಾರೆ. ಅವರಿಗೆ ಅಲ್ಲಿ ಏನೋ ಕಾಣುತ್ತದೆ. ಏನೋ ಕೇಳಿಸುತ್ತದೆ. ಎಲ್ಲರಿಗೂ ಹೇಳಬೇಕೆಂಬ ತುಡಿತದಲ್ಲಿ ಅಥವಾ ಕಂಡದ್ದರ, ಕೇಳಿದ್ದರ ಭಾರದಿಂದ ಬಿಡುಗಡೆ ಪಡೆಯಲು ಕವಿತೆ ಬರೆಯುತ್ತಾರೆ. ಪ್ರತಿಭೆಯಿದ್ದವನು ಕವಿತೆಯ ಮೂಲಕ ಓದುಗರಿಗೆ ವಿಶಿಷ್ಟ ರಸಾನುಭವವನ್ನು ನೀಡುತ್ತಾನೆ. ಅದೂ ಒಂದು ರೀತಿಯ ‘ಮತ್ತೇ’. ಅತ್ಯುತ್ತಮ ಕವಿತೆ ಓದುತ್ತಾ ರಸಾನುಭವದ ಮಧು ಹೀರುವವರಿದ್ದಾರೆ. ಕವಿತೆ ಓದುವವನಿಗೆ ಕವಿತೆಯ ಮೇಲೆ ಮಮತೆ ಇರಬೇಕು ಅನ್ನೋದು ಎಷ್ಟು ನಿಜ!
ಮೇಲಿನ ಸಾಲಿನಲ್ಲಿರುವ ‘ಮತ್ತು’ ಶರಾಬಿನದ್ದೇ ಆಗಿರಬೇಕಿಲ್ಲ. ಅಧಿಕಾರದ ಅಮಲಾಗಿರಬಹುದು. ಶ್ರೀಮಂತಿಕೆಯ ದಾಹವಾಗಿರಬಹುದು. ಪ್ರೇಮದ ನಶೆಯಾಗಿರಬಹುದು. ‘ಮತ್ತೇರಿಸಿದ’ ಮೇಲೆ ದೂಡಿ ಹಾಕುವವರ ಸಂಖ್ಯೆ ನಾಯಿಕೊಡೆಯಂತೆ ಬೆಳೆಯುತ್ತಿರುವ ಕಾಲಘಟ್ಟ ಇದು. ಅಧಿಕಾರದ ಮದದ ವಿಮರ್ಶೆ ಇಲ್ಲಿ ಇದೆಯಾ? ಶ್ರೀಮಂತಿಕೆಯ ಹಪಾಹಪಿಯಲ್ಲಿ ಕೆಳಗಿರುವವರ ತುಳಿವ ಜಾಢ್ಯದ ಬಗ್ಗೆ ಕವಿ ಹೇಳುತ್ತಿದ್ದಾರಾ? ಪ್ರೇಮದಲ್ಲಿ ಕುರುಡಾದವನು ಕತ್ತಲಲ್ಲಿ ನಡೆದು ಎಡವಿ ಬೀಳುವುದರ ಬಗ್ಗೆ ಕವಿ ಮಾತನಾಡುತ್ತಿದ್ದಾರಾ? ಗೊತ್ತಿಲ್ಲ. ಕವಿತೆಯ ಅರ್ಥ ಇದಮಿತ್ಥಂ ಎನ್ನುವಂತಿಲ್ಲ. ಒಬ್ಬೊಬ್ಬ ಓದುಗರಿಗೆ ಅರ್ಥದ ಒಂದೊAದು ದಿಗಂತವನ್ನು ತೆರೆದು ತೋರುವುದೇ ಕವಿತೆ.
ಇಲ್ಲಿ ನಾನು ಕವಿತೆಯ ವಿಮರ್ಶೆ ಮಾಡುತ್ತಿಲ್ಲ. ಕವಿತೆಯ ಒಂದು ಸಾಲು ಅಥವಾ ಒಂದಿಡೀ ಕವಿತೆ ನಮ್ಮನ್ನು ಆವರಿಸಿಕೊಳ್ಳುವ, ಸಂತೈಸುವ, ಹೊಸದೇನನ್ನೋ ಹೊಳೆಯಿಸುವುದರ ಬಗ್ಗೆ ಹೇಳುತ್ತಿದ್ದೇನೆ. ಒಳ್ಳೆಯ ಕವಿತೆಯನ್ನು ಓದಿದ ಮೇಲೆ ಮನಸಿಗೇನೋ ಹುರುಪು, ಖುಷಿ, ಕಂಪು. ಕೆಲವೊಂದು ಕವಿತೆಗಳು ಕಂಗೆಡಿಸುವುದೂ ಇದೆ. ನೆಲಕ್ಕೆ ಬೇರು ಬಿಟ್ಟಂತೆ ಕುಳಿತವರನ್ನು, ಪರಿಸರ ಮರೆತು ಸುಖ ನಿದ್ರೆಯಲ್ಲಿ ಮುಳುಗಿರುವವರನ್ನು ಎಬ್ಬಿಸಿ, ನಾಗರಿಕ ಕರ್ತವ್ಯ ಪ್ರಜ್ಞೆಯನ್ನು ಬಿತ್ತುವುದಿದೆ.
ಕವಿತೆ ಓದುವುದರ ಉದ್ದೇಶವೂ ಇದೇ ಇರಬಹುದಾ? ಕನಿಷ್ಠ ಪಕ್ಷ ನಮ್ಮ ಮನಸ್ಸನ್ನು ತಟ್ಟದಿದ್ದರೆ ಅದು ಎಂತಹ ಗತಿಗೆಟ್ಟ ಕವಿತೆಯಾಗಿರಬಹುದು? ದುರ್ಬಲನ ನೋವನ್ನು ತನ್ನದಾಗಿಸಿಕೊಳ್ಳದ ಕವಿ ಎಂತಹ ಮಾನಗೆಟ್ಟ ಕವಿ.
‘ಬಿದ್ದವನ ಎತ್ತಿ ಗಮ್ಯ ಸ್ಥಾನಕೆ ಸೇರಿಸದ’ ಬದುಕು ಬದುಕೇ ಅಲ್ಲ, ಅಂತಹ ಬದುಕು ಹುಟ್ಟಿಸಿದ ಕವಿತೆ ಕವಿತೆಯೇ ಅಲ್ಲ.
ಇಕ್ಬಾಲರು ಇಷ್ಟನ್ನು ಹೇಳಿರಬಹುದು ಅಂತ ನಂಬಿಕೊಂಡಿದ್ದೇನೆ.
ಲೇ: ಸ್ವಾಲಿಹ್ ತೋಡಾರ್
ನನಗೆ ಹಾಗೆನುಸುವದಿಲ್ಲ,ಕ್ಷಮೆ ಇರಲಿ,
“ಮತ್ತನೇರಿಸಿ ಯಾರಾದರೂ ಬೀಳಿಸಬಹುದು,ಆದರೆ ಸೊಗಸಿರುವುದು ಬೀಳುವವನಿಗೆ ಆಸರೆ ಕೊಡುವುದರಲ್ಲಿ,ಸಖಿ….”