ಬುದ್ಧಿವಂತಿಕೆ ಮತ್ತು ಸಂಸ್ಕಾರ ಇರುವ ಮನುಷ್ಯನಿಗೆ
ಮನೆಯ ಗೋಡೆಗಳ ನಡುವೆ ಆರಾಮ ಶೋಭೆಯಲ್ಲ
ಹಾಗಾಗಿ, ಯಾತ್ರೆ ಹೊರಡು
ತೊರೆದು ನಿನ್ನ ವಿರಾಮದ ಮನೆಯ
ಸಿಕ್ಕೇ ಸಿಗುತ್ತದೆ
ನೀನು ತೊರೆದುದುದರ ಬದಲಿ ನಿವಾಸ
ಮತ್ತು ಸೆಣಸಾಡು
ದಿಕ್ಕಾಪಾಲಾದ ಯಾತ್ರೆಯುದ್ದಕ್ಕೂ
ಬದುಕಿನ ಮಾಧುರ್ಯವಿರುವುದೇ
ಕಷ್ಟ ಕೋಟಲೆಗಳಲ್ಲಿ
ಮತ್ತದರೆದುರು ಸೆಣಸುವುದರಲ್ಲಿ
ನಾನು ಕಂಡಿದ್ದೇನೆ,
ನಿಂತ ನೀರು ದುರ್ನಾತ ಬೀರುವುದನ್ನು
ಮತ್ತದೇ ನೀರು ಹರಿಯತೊಡಗಿದರೆ
ಶುದ್ಧತೆಯನ್ನು ಪಡೆದುಕೊಳ್ಳುವುದನ್ನೂ
ಗುಹೆಯ ಬಿಟ್ಟು ಹೊರಬಾರದ ಸಿಂಹ
ಬೇಟೆಯಾಡುವಾದರೂ ಹೇಗೆ?
ಬಿಲ್ಲಿಂದ ನೆಗೆಯದ ಬಾಣ
ಗುರಿ ತಲುಪುವುದೆಂದಾರೂ ಇದೆಯೇ?
ನಿಶ್ಚಲನಾಗಿಬಿಟ್ಟರೆ ಸೂರ್ಯ
ಮನುಷ್ಯರೇನಾದಾರು?
ಅರಬನೋ, ಅರಬೇತರನೋ
ಹಾಗೆಯೇ ದಿಕ್ಕೆಟ್ಟು ಹೋದಾರು
ಚಿನ್ನವೂ ಮಣ್ಣಿನಂತೆಯೇ, ಅದು ಮಣ್ಣಿನೊಳಗಿದ್ದರೆ
ಸುಗಂಧ ಬೀರುವ ಊದ್‌ಗೂ ಕಟ್ಟಿಗೆಯದ್ದೇ ಬೆಲೆ
ಅದು ತನ್ನ ಸ್ಥಾನದಲ್ಲೇ ಬಂಧಿಯಾದರೆ
ಯಾವನಾದರೂ ತನ್ನ ನಿವಾಸದಿಂದ ಕಳಚಿಕೊಂಡರೆ
ಅವನು ಹುಡುಕುತ್ತಾನೆ, ಹುಡುಕಲ್ಪಡುತ್ತಾನೆ
ಯಾರಾದರೂ ತನ್ನ ವಿರಾಮದ ಮನೆಯ ತೊರೆದರೆ
ಅವನು ಚಿನ್ನದಂತೆ ಬೆಲೆ ಬಾಳುತ್ತಾನೆ
ಮೂಲ
ಮುಹಮ್ಮದ್ ಇಬ್ನ್ ಇದ್ರೀಸ್ ಅಲ್ ಶಾಫೀ (ರ.ಅ)
ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್
ಇಮಾಮ್ ಅಲ್ ಶಾಫೀ: ಪರಿಚಯ
ಮುಸ್ಲಿಂ ಜಗತ್ತಿನ ನ್ಯಾಯತತ್ವಗಳನ್ನು ನಿರೂಪಿಸಿದ ನಾಲ್ವರು ಮೇರು ಜ್ಞಾನಿಗಳ ಪೈಕಿ ಓರ್ವರಾಗಿದ್ದಾರೆ ಇಮಾಂ ಶಾಫಿ (ರ). ಇವರ ಪೂರ್ಣ ನಾಮ ಅಬೂ ಅಬ್ದಿಲ್ಲಾ ಮುಹಮ್ಮದ್ ಇಬ್ನು ಇದ್ರೀಸ್ ಅಲ್ ಶಾಫೀಈ. ಕ್ರಿ.ಶ 767ರಲ್ಲಿ ಫೆಲೆಸ್ತೀನ್‌ನ ಗಾಝಾದಲ್ಲಿ ಜನಿಸಿದರು. ಎರಡನೆಯ ವಯಸ್ಸಿನಲ್ಲಿ ತಾಯಿಯೊಂದಿಗೆ ಮಕ್ಕಾ ವಾಸ್ತವ್ಯ ಶುರು ಮಾಡಿದ ಇಮಾಮರ ಶಿಕ್ಷಣ ಮತ್ತು ಬೆಳವಣಿಗೆ ನಡೆದದ್ದು ಅಲ್ಲೇ. ಏಳನೆಯ ಮತ್ತು ಹತ್ತನೆಯ ವಯಸ್ಸಿನಲ್ಲಿ ಅನುಕ್ರಮವಾಗಿ ಪವಿತ್ರ ಖುರ್‌ಆನ್ ಹಾಗೂ “ಮುವತ್ತ” ಎಂಬ ಬೃಹತ್ ಹದೀಸ್ ಗ್ರಂಥವನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದರು.
ಇಮಾಂ ಮಾಲಿಕ್ ರವರ ಬಳಿ ಮದೀನಾದಲ್ಲಿ ಮತ್ತು ಇಮಾಂ ಶೈಬಾನಿಯವರ ಬಳಿ ಇರಾಕಿನಲ್ಲಿ ಜ್ಞಾನಾರ್ಜನೆ ಮಾಡಿರುವ ಅವರು ಜ್ಞಾನಕ್ಕಾಗಿ ಇನ್ನೂ ಹಲವು ದುರ್ಗಮ ದಾರಿಗಳನ್ನು ಸವೆಸಿದ್ದಾರೆ. ಕಿರಿಯ ಪ್ರಾಯದಲ್ಲೇ ಪ್ರಸಿದ್ಧ ವಿದ್ವಾಂಸರಾಗಿ ಜನಜನಿತರಾದ ಇಮಾಮರಿಗೆ ಹದಿನೈದನೇ ವಯಸ್ಸಿನಲ್ಲೇ ಫತ್ವಾ(ಧಾರ್ಮಿಕ ತೀರ್ಪು) ವಿಧಿಸಲು ಗುರುದೀಕ್ಷೆ ದೊರೆತಿತ್ತು.
ಧಾರ್ಮಿಕ ಶಿಸ್ತುಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದೇ ಅಲ್ಲದೆ ವೈದ್ಯಕೀಯ, ಭಾಷಾವಿಜ್ಞಾನ, ಖಗೋಳಶಾಸ್ತ್ರ ಸಾಹಿತ್ಯ ಹಾಗೂ ಕಾವ್ಯದಂತಹ ಉದಾರ ಕಲೆಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದರು ಇಮಾಂ. ಕರ್ಮಶಾಸ್ತ್ರದ ನ್ಯಾಯತತ್ವಗಳು ಹಾಗೂ ವಿಧಾನಶಾಸ್ತ್ರಗಳನ್ನು ಅನ್ವೇಷಿಸಲಾಗುವ ‘ಉಸೂಲುಲ್ ಫಿಖ್‌ಹ್’ ಎಂಬ ಬೌದ್ಧಿಕ-ಭಾಷಾವೈಜ್ಞಾನಿಕ ಜ್ಞಾನಕ್ಷೇತ್ರದ ಪಿತಾಮಹ ಕೂಡಾ ಇವರೆ. ಪೋಸ್ಟ್ ಕ್ಲಾಸಿಕಲ್ ಕಾಲದಲ್ಲಿ ಸಾಹಿತ್ಯ ಕೃಷಿ ನಡೆಸಿದವರ ಪೈಕಿ ಭಾಷಾ ವಿಜ್ಞಾನದ ಆಕರಗಳಾಗಿ ಸರ್ವಾಂಗೀಣ ಸ್ವೀಕೃತಿ ಲಭಿಸಿದ ಏಕೈಕ ವಿದ್ವಾಂಸರಾಗಿದ್ದಾರೆ ಈ ಮಹಾನುಭಾವರು. ಜಗತ್ಪ್ರಸಿದ್ಧ ಕವಿ ಕೂಡಾ ಆಗಿರುವ ಇಮಾಮರ ಕಾವ್ಯಗಳಲ್ಲಿ ಜ್ಞಾನ, ಪರಿತ್ಯಾಗ, ಅನುಭಾವ, ಮರಣ ಮುಂತಾದವುಗಳು ಮೇರು ಕಲ್ಪನಾಶೀಲತೆಯೊಂದಿಗೆ ಮೂಡಿ ಬಂದಿದೆ. ಅರೇಬಿಕ್ ಭಾಷೆಯ ಮೂಲಸೌಂದರ್ಯವನ್ನು ಕರತಲಾಮಲಕಗೊಳಿಸಲು ಇಮಾಮರು ಸಾಕ್ಷಾತ್ ಅರಬ್ ಬುಡಕಟ್ಟು ಜನಾಂಗಗಳ ನಡುವೆ ವರ್ಷಾನುಗಟ್ಟಲೆ ವಾಸ ಮಾಡಿದ್ದರು ಎನ್ನುವುದು ಸೋಜಿಗವೆ. ಬದುಕಿನ ಮೌಲ್ಯವನ್ನು ಸಾರುವ ಮತ್ತು ಜೀವನ ಸಾಫಲ್ಯತೆ ನೀಡುವ ಉಪದೇಶಗಳಾಗಿವೆ ಅವರ ಹೆಚ್ಚಿನ ಕವಿತೆಗಳ ಹೂರಣ. ಮಕ್ಕಾ, ಮದೀನಾ, ಯಮನ್, ಇರಾಕ್ ಮುಂತಾದೆಡೆ ಪ್ರಯಾಣ ಮಾಡಿ ಅರಿವನ್ನು ಸಂಪಾದಿಸಿದ್ದ ಆ ಮಹಾನ್ ಚೇತನ ಕ್ರಿ.ಶ 820ರಲ್ಲಿ ಈಜಿಪ್ಟ್‌ನಲ್ಲಿ ಕಾಲವಾದರು. ನೂರಕ್ಕೂ ಮಿಕ್ಕ ಪ್ರಸಿದ್ದ ಗ್ರಂಥಗಳನ್ನೂ, ಇಮಾಂ ಅಹ್ಮದ್ ಇಬ್ನು ಹಂಬಲ್‌ರಂಥ ಅತಿರಥ ಮಹಾರಥ ವಿದ್ವಾಂಸರನ್ನು ಸಮಾಜಕ್ಕೆ ಸಮರ್ಪಿಸಿ 54ನೇ ವಯಸ್ಸಿನಲ್ಲಿ ತನ್ನ ಸಾರ್ಥಕ ಬದುಕನ್ನು ಮುಗಿಸಿದ್ದರು. ಈಜಿಪ್ಟಿನ ರಾಜಧಾನಿ ಕೈರೋ ದಲ್ಲಿ ಅವರನ್ನು ದಫನುಗೊಳಿಸಲಾಗಿದೆ.