ಇಸ್ಲಾಂ ಧರ್ಮದಲ್ಲಿ ಪುರುಷ ಮತ್ತು ಸ್ತ್ರೀಯರಿಗೆ ತಲೆ ಮುಚ್ಚಲು ಆದೇಶವಿದ್ದರೂ, ಇತರ ಧರ್ಮೀಯರು ಕೂಡ ಅದನ್ನು ಅನುಸರಿಸುತ್ತಾರೆ. ಶಿರೋವಸ್ತ್ರ ಧರಿಸುವ ರೀತಿ ನೋಡಿ ಓರ್ವ ವ್ಯಕ್ತಿಯ ಪ್ರದೇಶ, ಸ್ಥಿತಿ, ಆತನ ಧರ್ಮ (ಉದಾಹರಣೆಗೆ: ಮುಸ್ಲಿಮನು ನಮಾಝ್ ಮಾಡುವಾಗ ಹಣೆ ನೆಲಕ್ಕೆ ತಾಗಲು ಅನುವಾಗುವಂತೆ ತಲೆ ಮರೆಸಿರುತ್ತಾನೆ) ವನ್ನು ತಿಳಿಯಬಹುದು.
ಸಾಮಾನ್ಯವಾಗಿ ಕಂಡುಬರುವ ಪುರುಷರ ಶಿರೋವಸ್ತ್ರ ಗಳು ಇವುಗಳಾಗಿವೆ:
ಟೋಪಿ (ತಖಿಯ, ಅರಖಿಯೆ), ಫೆಝ್ ಟೋಪಿ (ತಾರ್ಬುಷ್), ಪೇಟ (ಶಾಲು, ಇಮಾಮ/ ಇಹ್ರಾಂ), ಮುಚ್ಚಲಾದ ಶಿರೋವಸ್ತ್ರ ಮತ್ತು ವೃತ್ತಾಕಾರದ ಬ್ಯಾಂಡ್ (ಕೂಫಿಯ, ಕೆಫಿಜೆ). ಕೆಲವೊಮ್ಮೆ ಶಿರೋವಸ್ತ್ರ ಧರಿಸಿದವನಲ್ಲಿ ಒಂದು ಟೋಪಿ, ಒಂದು ಫೆಝ್ ಟೋಪಿ, ಪೇಟ ಇಲ್ಲದಿದ್ದರೆ ಹೆಡ್ ಸ್ಕಾರ್ಫ್ ಇರುವುದು. ಕೆಲವೊಮ್ಮೆ ಇವುಗಳು ಒಂದೋ ಎರಡೋ ಹೊಂದಿರುತ್ತಾನೆ. ಫೆಝ್ ಎಂಬ ಟೋಪಿಗೆ ಐತಿಹಾಸಿಕ ಹಿನ್ನೆಲೆಯಿದೆ. ಕೂಫಿಯ ಎಂಬುದು ಅರಬ್ಬರು ಮತ್ತು ಮರಳುಗಾಡಿನ ಅಲೆಮಾರಿಗಳೊಂದಿಗೆ ಥಳುಕು ಹಾಕಿಕೊಂಡಿದೆ. ಪೇಟವು ಉತ್ತರ ಆಫ್ರಿಕಾದ ಮೊರೊಕೊ, ಈಜಿಪ್ಟ್ ಎಂಬಲ್ಲಿ ಮತ್ತು ಇರಾನಿನ ನಾಯಕರಲ್ಲಿ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಸರ್ವೇಸಾಮಾನ್ಯವಾಗಿದೆ.
ತಖಿಯ (ಟೋಪಿ)
ಟೋಪಿಯನ್ನು ಹಿರಿಯ ನಾಗರಿಕರು ಧರಿಸುತ್ತಾರೆ. ಪ್ಯಾಲೆಸ್ಟೈನ್ ನಂತಹ ದೇಶದಲ್ಲಿ ಒಂದು ಸಮೂಹದ ಹುಡುಗರು ಸಾಮಾನ್ಯವಾಗಿ ಧರಿಸುವ ಶಿರೋವಸ್ತ್ರವಾಗಿದೆ ಇದು. ಪೇಟ ಧರಿಸುವಾಗ ಸಾಮಾನ್ಯವಾಗಿ ಟೋಪಿ ಧರಿಸಿರುತ್ತಾರೆ. ಪರಂಪರಾಗತವಾಗಿ ತಾರ್ಬುಷ್ ಅಥವಾ ಫೆಝ್ ನೊಂದಿಗೆ ಪೇಟ ಧರಿಸಲಾಗುತ್ತಿತ್ತು. ಕೆಲವೊಮ್ಮೆ ಮಹಿಳೆಯರೂ ಅವರ ಶಿರೋವಸ್ತ್ರಗಳ ಒಳಗೆ ಟೋಪಿ ಧರಿಸಿರುವರು. ಅದೇರೀತಿ ಶಿರೋವಸ್ತ್ರದ ಕೆಳಗೆ ಟೋಪಿ ಧರಿಸುವ ಶೈಲಿ ಅಫ್ಘಾನಿನಲ್ಲಿದೆ.
ಫೆಝ್ ಅಥವಾ ತಾರ್ಬುಷ್
ಮೊರೊಕೊದ ಫೆಝ್ ಎಂಬ ನಗರದ ಹೆಸರಿನಲ್ಲಿ ಗುರುತಿಸಲ್ಪಡುವ ತಾರ್ಬುಷ್ (ಚೆಚಿಯ ಮತ್ತು ಫೆಸಿ ಎಂಬ ಹೆಸರುಗಳು ಇವೆ) ಎನ್ನುವ ಈ ಶಿರೋವಸ್ತ್ರವು ಕೆಲವೊಮ್ಮೆ ಟೋಪಿಯ ಮೇಲೆ ಧರಿಸುವುದುಂಟು. ಫೆಝ್ ಟೋಪಿಯ ನಿಜವಾದ ಆವೃತ್ತಿಯು ಮೃದುವಾಗಿದ್ದು, ದುಂಡಗಿರುತ್ತದೆ. ಅದೇ ಸಮಯದಲ್ಲಿ ಫೆಝ್ ಟೋಪಿಯ ಟರ್ಕಿಶ್ ಆವೃತ್ತಿಯು ದೃಢವಾದ ಅಂಚನ್ನು ಹೊಂದಿರುತ್ತದೆ. ಅದರಲ್ಲಿ ತೂಗುಹಾಕಲಾದ ಕೆಂಪು ಬಣ್ಣದ ನೂಲುಗಳಿರುತ್ತವೆ. ಪ್ಯಾಲೆಸ್ಟೈನ್ ನಲ್ಲಿ ಈ ಎರಡೂ ಆವೃತ್ತಿಗಳು ‘ಟಾರ್ಬುಷ್ ಇಸ್ತಾಂಬುಲಿ’ ಮತ್ತು ‘ಟಾರ್ಬುಷ್ ಮಗ್ರಿಬಿ’ ಎಂಬ ಹೆಸರುಗಳ ಮೂಲಕ ಪ್ರಸಿದ್ಧವಾಗಿವೆ. ಟರ್ಕಿಶ್ ಆವೃತ್ತಿಯು ಗ್ರಾಮೀಣ ಸೊಗಡನ್ನು ಹೊಂದಿದ್ದರೆ, ಮೊರೊಕೊ ಆವೃತ್ತಿಯು ನಗರದ ಪ್ರಭಾವವನ್ನು ಹೊಂದಿದೆ.
ತುರ್ಕಿಯಲ್ಲಿ 19ನೇ ಶತಮಾನದ ಆರಂಭದಲ್ಲಿ ಫೆಝ್ ಟೋಪಿ ಧರಿಸುವುದು ಎಲ್ಲಾ ಪುರುಷರ ಔಪಚಾರಿಕ ವಸ್ತ್ರಧಾರಣೆಯ ಭಾಗವಾಗಿತ್ತು. ಆದರೆ ತುರ್ಕಿ ರಿಪಬ್ಲಿಕ್ ಸ್ಥಾಪನೆಯಾದ ಮೇಲೆ ಅಲ್ಲಿಗೆ ಪಾಶ್ಚಾತ್ಯ ಸಂಸ್ಕೃತಿ ವಕ್ಕರಿಸಿತು. ಅತಾತುರ್ಕ್ ಕೆಮಾಲ್ ಪಾಷಾ ಫೆಝ್ ಟೋಪಿಯ ಮೇಲೆ ನಿರ್ಬಂಧ ಹೇರಿದನು. ಕ್ರಿ.ಶ 1820 ರಲ್ಲಿ ಈಜಿಪ್ಟ್ ದೇಶವು ಇದನ್ನು ತಮ್ಮ ಸೇನೆಯ ಸಮವಸ್ತ್ರಕ್ಕೆ ಆಯ್ಕೆ ಮಾಡಿತು. ಈ ಟೋಪಿಯ ಪ್ರಮುಖ ಉತ್ಪಾದಕ ರಾಷ್ಟ್ರವಾಗಿ ಅದು ಬೆಳೆಯಿತು. ಈ ಟೋಪಿಯು ಆಟೋಮನ್ ಪ್ರಭಾವವನ್ನು ಹೊಂದಿರುವುದರಿಂದ, ಕ್ರಿ.ಶ 1952ರ ಈಜಿಪ್ಟ್ ಕ್ರಾಂತಿಯ ನಂತರ ಈಜಿಪ್ಟಿನಲ್ಲೂ ನಿರ್ಬಂಧಿಸಲಾಯಿತು.
ಪೇಟ (ಡಲ್ ಬ್ಯಾಂಡ್, ಇಮಾಮ, ಲಫ್ಫೆ, ಮಸಾರ್, ಸಾರಿಕ್)
ಪೇಟ ಎಂದರೆ ಅದೊಂದು ನೀಳವಾದ ಶಾಲು. ಇದು 2 ರಿಂದ 16 ಮೀಟರ್ ವರೆಗೆ ಉದ್ದವಿರಬಹುದು. ತಖಿಯ, ತಾರ್ಬುಷ್ ನ ಸುತ್ತ ಮತ್ತು ಅದರ ಮೇಲೂ ಧರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತಾರ್ಬುಷ್ ಹೊರಗೆ ಕಾಣುವಂತಿರುತ್ತದೆ. ಹಾಗೂ ಟೋಪಿಯ ಮೇಲಿನ ತೆನೆಯು ತೂಗುತ್ತಿರುತ್ತದೆ. ಯಮನ್ ನಲ್ಲಿ ಪೇಟದ ಒಳಗೆ ಧರಿಸುವ ಟೋಪಿಗೆ ‘ಕಲನ್ಸುವ’ ಎಂದು ಹೆಸರು. ಉತ್ತರ ಆಫ್ರಿಕಾದ ಮೊರೊಕೊ, ಈಜಿಪ್ಟ್ ಗಳಲ್ಲಿ, ಒಮಾನ್, ಇರಾನಿನ ನಾಯಕರ ನಡುವೆ ಹಾಗೂ ಪೌರ್ವಾತ್ಯ ದೇಶಗಳಲ್ಲಿ ಪೇಟವು ಸಾಮಾನ್ಯ ಶಿರೋವಸ್ತ್ರವಾಗಿದೆ. ಲೆವೆನ್ಟ್ ಪ್ರಾಂತ್ಯದ ಸಾಮಾನ್ಯ ಶಿರೋವಸ್ತ್ರವಾಗಿದ್ದರೂ, ಪ್ಯಾಲೆಸ್ಟೈನ್ ನಲ್ಲಿ ಇದನ್ನು ತ್ಯಜಿಸಲಾಗಿತ್ತು. ಅಲ್ಲಿ ಕ್ರಿ.ಶ 1930 ರಲ್ಲಿ ರಾಷ್ಟ್ರೀಯತೆಯ ಭಾಗವಾಗಿ ‘ಕೂಫಿಯಾ’ ಎಂಬ ಹೆಸರಿನ ಶಿರೋವಸ್ತ್ರವು ಜಾರಿಗೆ ಬಂದಿತು. ತೆನೆಗಳು ತೂಗುತ್ತಿರುವುದರಿಂದ ‘ಹಾರುವ ಪೇಟ’ ಎಂದು ಕುರ್ದಿಷ್ ಪೇಟವನ್ನು ಕರೆಯಲಾಗುತ್ತದೆ.
ಕೂಫಿಯ
ಇದು ಒಂದು ಚೌಕಾಕಾರದ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಚಿ, ಅದರ ಎರಡು ಅಂಚುಗಳನ್ನು ತೋಳಿನಲ್ಲಿಟ್ಟು, ಮೂರನೇ ಅಂಚನ್ನು ಹಿಮ್ಮುಖವಾಗಿ ಇಳಿಬಿಟ್ಟು ಕಟ್ಟುವ ಶಿರೋವಸ್ತ್ರವಾಗಿದೆ. ‘ಇಕಲ್’ ಎಂಬ ಒಂಟೆಯ ರೋಮದಿಂದ ತಯಾರಿಸಲಾದ ವೃತ್ತಕವನ್ನು ಬಳಸಿ ಅದನ್ನು ದೃಢಗೊಳಿಸಲಾಗುತ್ತದೆ. ಇಕಲ್ ನ ಕೆಳಗಿರುವ ಚೌಕಾಕಾರದ ಬಟ್ಟೆಗೆ ‘ಗೌತ್ರ’ ಎಂದು ಹೆಸರು. ಗೌತ್ರದ ಕೆಳಗೆ ತಖಿಯವನ್ನು ಬಳಸಲಾಗುತ್ತದೆ. ಕೂಫಿಯ ಎಂಬುದು ಅರಬ್ಬರು ಮತ್ತು ಮರಳುಗಾಡಿನ ಅಲೆಮಾರಿಗಳೊಂದಿಗೆ ಸಂಬಂಧ ಹೊಂದಿದೆ. ಈಜಿಪ್ಟಿಯನ್ನರು, ಒಮಾನ್ ಪ್ರಜೆಗಳು ಇದನ್ನು ಧರಿಸುವುದಿಲ್ಲ. ಅವರು ಪ್ರತ್ಯೇಕ ಶೈಲಿಯ ಪೇಟವನ್ನು ಇಷ್ಟಪಡುತ್ತಾರೆ. ಕ್ರಿ.ಶ 1930ರಲ್ಲಿ ಪ್ಯಾಲೆಸ್ಟೀನಿಯನ್ನರು ಕೂಫಿಯ ಶಿರೋವಸ್ತ್ರಕ್ಕೆ ಮಾರು ಹೋದರು. ಕ್ರಿ.ಶ 1967 ರಲ್ಲಿ ಪ್ಯಾಲೆಸ್ಟೈನ್ ನಾಯಕ ಯಾಸಿರ್ ಅರಫಾತ್ ಅವರು ಧರಿಸುತ್ತಿದ್ದ ಕಪ್ಪು ಬಿಳುಪು ಗೆರೆಗಳಿದ್ದ ಕೂಫಿಯ ವ್ಯಾಪಕವಾಗಿತ್ತು. ಜೋರ್ಡಾನಿನ ಕೂಫಿಯ ಕೆಂಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇರಾಕಿನಲ್ಲಿ ನಸು ಕಪ್ಪು ನೇಯ್ಗೆ ಇದ್ದರೆ, ಸೌದಿ ಮತ್ತು ಕುವೈಟಿನ ಕೂಫಿಯ ಬಿಳಿ ಬಣ್ಣದಲ್ಲಿರುತ್ತದೆ. ಇನ್ನೂ ಕೆಲವು ಶೈಲಿಯ ಶಿರೋವಸ್ತ್ರವಿದ್ದರೂ ಅವುಗಳ ಬಳಕೆ ತೀರ ಅಪರೂಪ. ಮೊರೊಕೊದ ಬೆರ್ಬೆರರು ಸಾಮಾನ್ಯವಾಗಿ ನೀಳವಾದ ಜೆಲ್ಲಾಬಿಯನ್ನು ತಲೆಯಲ್ಲಿ ಧರಿಸಿರುತ್ತಾರೆ. ಡ್ರೂಝ್ (ಸಿರಿಯ, ಲೆಬನಾನಿನ ಒಂದು ಜನಾಂಗ) ಜನಾಂಗದವರಿಗೆ ಅವರದ್ದೇ ಆದಂತಹ ಶಿರೋವಸ್ತ್ರ ಶೈಲಿಯಿದ್ದರೆ, ಇರಾನಿನ ಕುರ್ದಿಷ್ ಗಳು ಭಿನ್ನವಾದ ಖಾಷ್ಕಾಯ್ ಟೋಪಿಗಳನ್ನು ಬಳಸುತ್ತಾರೆ. ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣದ ಪುರುಷರು ಮತ್ತು ಮಹಿಳೆಯರು ಶಂಕುವಿನಾಕಾರದ ಒಣ ಹುಲ್ಲಿನಿಂದ ಮಾಡಿದ ಟೋಪಿಗಳನ್ನು ಧರಿಸುತ್ತಾರೆ.
ಮೂಲ: ಅಲೆಕ್ಸ್ ಬ್ರೆಸ್ಲರ್
ಕನ್ನಡಕ್ಕೆ: ಮುಹಮ್ಮದ್ ಶಮೀರ್ ಪೆರುವಾಜೆ