ಹದಿನೈದನೆಯ ಶತಮಾನದ ಮಹಾನ್ ಸೂಫಿ ಸಂತ, ತತ್ವಜ್ಞಾನಿ, ಕವಿ-ಲೇಖಕ ಬಂದೇ ನವಾಜ್ ಅವರ ಬದುಕು- ಸಾಹಿತ್ಯ ಕುರಿತು ಚರ್ಚಿಸುವ ಗ್ರಂಥವಿದು. ಕನ್ನಡ ಸಾಹಿತ್ಯ ಹಾಗೂ ಸೂಫಿ ಚಿಂತನೆ ಮತ್ತು ಕಾವ್ಯಗಳ ನಡುವಿನ ಸಖ್ಯವು ಅತ್ಯಂತ ಸಂಕೀರ್ಣವು ಶ್ರೀಮಂತವೂ ಆಗಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಂಸ್ಕೃತಿಯೊಳಗೆ ಸೂಫೀ ಚಿಂತನೆಗಳು ನಿಧಾನವಾಗಿ ಒಳನುಸುಳುತ್ತಿವೆ. ವಿಶಿಷ್ಟವಾಗಿ ಸಂತರ ಸಂಸ್ಕೃತಿಯೊಂದು ಕನ್ನಡ ಭಾಷೆಯಲ್ಲಿ ಬೆಳೆಯುತ್ತಾ ಬರುತ್ತಿದೆ. ಸೂಫಿಗಳ ಕುರಿತಿರುವ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಬೆರಳಣಿಕೆಯಷ್ಟು ಮಾತ್ರ ಕಾಣಲು ಸಾಧ್ಯ. ಇದಕ್ಕೆ ಇನ್ನೊಂದು ಗರಿಯನ್ನು ಸೇರಿಸುವಲ್ಲಿ ಲೇಖಕ ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿಯವರು ಸಫಲರಾಗಿದ್ದಾರೆ.
ಲೇಖಕರು ಕೃತಿಯಲ್ಲಿ ಸೂಫಿ ಸಿದ್ಧಾಂತ, ಖಾದ್ರಿಯಾ, ಜುನೈದಿಯಾ, ಜಿಶ್ತಿಯಾ, ಸೂಫಿ ಪರಂಪರೆ, ಬಂದೇ ನವಾಜರ ಬದುಕು, ಬರಹ ಜೀವನ, ಸೂಫಿಗಳ ಆಚರಣೆಗಳು, ಬಹಮನಿ ಸುಲ್ತಾನ ಫಿರೋಜ್ ಷಾ ಮತ್ತು ಬಂದೇನವಾಜರ ಸಂಬಂಧ ಮುಂತಾದ ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ. ಕೃತಿಯನ್ನು ವಿಭಾಗಗಳನ್ನಾಗಿಸಿ ಮೊದಲನೇ ಅಧ್ಯಾಯದಲ್ಲಿ ಸೂಫಿ ಅನುಭಾಗಳ ಕುರಿತು ಪರಿಚಯಿಸಿದ್ದಾರೆ. ಸೂಫಿ ಹಾಗೂ ತಸವ್ವುಫ್ ಇದರ ಉಗಮ, ವ್ಯಾಖ್ಯೆ, ಪರಿಭಾಷ ಹಾಗೂ ಸೂಫಿ ಚಿಂತನೆಗಳ ಕುರಿತು ಆಳ ಅಧ್ಯಯನವಿದೆ.
ಸೂಫಿಯನ್ನ ವ್ಯಾಖ್ಯಾನಿಸುತ್ತಾ “ಯಾರನ್ನು ಪ್ರೇಮವು ಪವಿತ್ರಗೊಳಿಸಿದೆ, ಅದು ಸ್ವಚ್ಛತಾ ವಸ್ತ್ರವಾಗಿದೆ. ಹಾಗು ಯಾರನ್ನು ಸಖನು ಪವಿತ್ರಗೊಳಿಸಿದ್ದಾನೆ ಅವನು ಸೂಫಿಯಾಗಿದ್ದಾನೆ.” ಈ ರೀತಿಯಾಗಿ ಪರಮಾತ್ಮನೊಂದಿಗೆ ಸ್ನೇಹ ಬೆಳೆಸಿ ಸಂಬಂಧವನ್ನು ಬೆಳೆಸಿ ಉಪವಾಸ ಕೂತು ನಿಜ ಜೀವನದ ಸಿಹಿಯನ್ನು ಪಡೆಯದೆ ಜೀವಿಸುವವರಾಗಿದ್ದಾರೆ ಸೂಫಿಗಳು ಎಂದು ವ್ಯಾಖ್ಯಾನಿಸುತ್ತಾರೆ. ಮೂಲವಾಗಿ ‘ಸೂಫಿ’ ಪದವು ಎಲ್ಲಿಂದ ಬಂತು ಎಂಬುದಕ್ಕೆ ನಿಖರವಾದ ಪುರಾವೆಗಳಿಲ್ಲ. ಪ್ರಮುಖರು ಹೇಳುವಂತೆ ‘ಸೂಫಿ’ ಎಂಬ ಪದವು ಮಕ್ಕಾ ಪಟ್ಟಣದಲ್ಲಿ ಮಸೀದಿ ಎದುರು ಕುಳಿತಿರುವ ದೈವಭಕ್ತ ಫಕೀರರೆಂದೂ, ಇನ್ನು ಕೆಲವರ ಪ್ರಕಾರ ಸುಫಾ ಅಂದರೆ ಪಂಕ್ತಿ ಅಥವಾ ಸಾಲು ಎಂದರ್ಥವಿದೆ. ಅದಲ್ಲದೆ ಇವರು ಹೊಂದಿದ ಜ್ಞಾನದಿಂದಾಗಿ ಇವರನ್ನು ಸೂಫಿ ಎಂದು ಕರೆಯಲಾಯಿತು ಎಂಬ ಐತಿಹ್ಯ ಕೂಡಾ ಇದೆ. ಹೀಗೆ ಸೂಫಿ ಉಗಮದ ಕುರಿತಿರುವ ಆಳ ಅಧ್ಯಯನವಿದೆ.
ಭಾರತದಲ್ಲಿ ಸೂಫಿ ದಾರ್ಶನಿಕತೆಯ ಆಗಮನ ಹಾಗು ಪ್ರಸಾರವು ಇತಿಹಾಸದ ಪ್ರಮುಖವಾದ ಅಂಶವಾಗಿತ್ತು. 13ನೇ ಶತಮಾನದಲ್ಲಿ ಆರಂಭವಾದ ಸೂಫಿಗಳ ಭಾರತ ಪ್ರವೇಶ ಕೇವಲ ಭೌತಿಕ ಲಾಭಕ್ಕಾಗಿರಲಿಲ್ಲ ಹೊರತು ಜಾತಿ, ಧರ್ಮ, ದೇಶಗಳ ಬೇಧಗಳನ್ನ ಮೀರಿ ಆಧ್ಯಾತ್ಮಿಕತೆಯನ್ನ ಮೈಗೂಡಿಸಿ ಸಾಮಾನ್ಯ ಜನಮನಸ್ಸುಗಳಿಗೆ ಪ್ರಚುರಪಡಿಸುವ ಉದ್ದೇಶದಿಂದಾಗಿತ್ತು. ಹೀಗೆ ಬಂದವರಲ್ಲಿ ಮಧ್ಯ ಏಷಿಯಾದಲ್ಲಿ ಜನಿಸಿದ ಖ್ವಾಜ ಮುಈನುದ್ದೀನ್ ಚಿಸ್ತಿ (1143–1236) ಪ್ರಮುಖರಾಗಿದ್ದರು. ಇವರು 1192 ರಲ್ಲಿ ದೆಹಲಿಗೆ ಆಗಮಿಸಿದಾಗ ಸುಲ್ತಾನ್ ಶಂಷುದ್ದೀನ್ ಅಲ್ತಮಿಷನು ಅಮೂಲ್ಯ ಕಾಣಿಕೆಗಳನ್ನ ನೀಡಿಯೂ ಗೌರವಿಸಿದ್ದರು. ಅದ್ವಿತೀಯ ಲೇಖಕರು ಕವಿಗಳಾಗಿರುವ ಇವರು ಫಾರ್ಸಿ ಭಾಷೆಯಲ್ಲಿ ಹತ್ತು ಸಾವಿರ ಕವನಗಳನ್ನು ರಚಿಸಿ ಕ್ರಿ.ಶ 1236 ರಲ್ಲಿ ನಿಧನ ಹೊಂದಿದರು.
ಆನಂತರ ‘ಸುಲ್ತಾನೆ ಹಿಂದ್’ ಎಂದು ಖ್ಯಾತರಾಗಿದ್ದ ಅಜ್ಮೀರಿನ ಮುಈನುದ್ದೀನ್ ಚಿಶ್ತಿ ದೆಹಲಿಯ ನಿಜಾಮುದ್ದೀನ್ ಔಲಿಯಾರ (1238 – 3 April 1325) ತರುವಾಯ ಅತ್ಯಂತ ಜನಪ್ರಿಯರಾದ ಇನ್ನೋರ್ವ ಸೂಫಿ ಹಜ್ರತ್ ಖಾಜಾ ಬಂದೇ ನವಾಝ್ ಗೇಸುದರಾಜರವರು. ಕ್ರಿ.ಶಕ 1321ನೇ ಇಸವಿಯಲ್ಲಿ ಜನಿಸಿ 1422 ನೇ ಇಸವಿಯಲ್ಲಿ ಮರಣಹೊಂದಿದ ಮಹಾನುಭಾವರಿಗೆ 103 ವರ್ಷದ ತುಂಬು ಪ್ರಾಯ. ಇವರು ಅರಬಿ, ಫಾರ್ಸಿ, ದಖನಿ ಮೂರು ಭಾಷೆಗಳಲ್ಲಿ ಸೇರಿ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್ ಅವರ ಆಗಮನ ಕೇವಲ ಗುಲ್ಬರ್ಗಾಕೆ ಸೀಮಿತವಾಗಿರದೆ, ಇಡೀ ದಖ್ಖನಿನಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಭದ್ರ ಬುನಾದಿಗೆ ನಾಂದಿಯಾಯಿತು.
ಯಾಕೆಂದರೆ ತಾತ್ವಿಕತೆಯ ಕಾರಣಕ್ಕಾಗಿ ಜಾಗತಿಕ ನಕಾಶೆಯಲ್ಲಿ ತನ್ನದೇ ಛಾಪು ಮೂಡಿಸಿದ ಬಂದೇ ನವಾಜ್ ರು ಕವಿ-ಲೇಖಕರಾಗಿ ಅದೇ ತಾತ್ವಿಕತೆಯನ್ನು ಬರಹದಲ್ಲಿ ತಂದವರು. ಬಂದೇ ನವಾಝರು ‘ಸಮಾ’ ಪ್ರೇಮಿಗಳಾಗಿದ್ದರು.
ದೈವಿಸಾನಿಧ್ಯಕ್ಕೆ ಕೊಂಡುಯ್ಯುವ ಸಮಾ ಗಳ ಕುರಿತು ಕೃತಿ ಪ್ರಸ್ತಾಪಿಸಿದೆ. ತುಘಲಕ್ ನ ಕಾಲದಲ್ಲಿ ಸೂಫಿಗಳು ಹಾಗೂ ಉಲೇಮಾಗಳ ಮಧ್ಯೆ ಸಮಾಗಳ ಕುರಿತು ನಡೆದ ಸಂಪೂರ್ಣ ಚಿತ್ರಣವು ಕೃತಿಯಲ್ಲಿದೆ.
ಸಮಾಗಳೆಂದರೆ ಸೂಫಿಗಳ ಹಾಗೂ ಅವರ ರಚನೆಗಳನ್ನು ಹಾಡುವ ‘ಅನುಭಾವ ಸಂಗೀತ ಗೋಷ್ಠಿ’ ಗಳೆಂದು ಕರೆಯಬಹುದು. ಅದಲ್ಲದೆ ಸಾಮಾನ್ಯ ಜನರಲ್ಲಿ ತಮ್ಮ ಸೂಫಿ ಸಂದೇಶದ ಪ್ರಚಾರಕ್ಕಾಗಿ ದಖ್ಖನಿ ಭಾಷೆ ಪ್ರಥಮವಾಗಿ ಸಾಹಿತ್ಯಿಕವಾಗಿ ಬಳಸಿದ ಕೀರ್ತಿ ಹಜ್ರತ್ ಖ್ವಾಜಾ ಬಂದೇ ನವಾಝರಿಗೆ ಸಲ್ಲುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ಕಲೆಗೆ ಸಂಬಂಧಿಸಿದಂತೆ ಹಿಂದಿ ಭಾಷೆಯಲ್ಲಿ ಅಮೀರ್ ಖುಸ್ರೊ ಹಲವು ಕೃತಿ ರಚಣೆ ಮಾಡಿದ್ದರು. ಹಿಂದಿ ಭಾಷೆಯ ಬಗ್ಗೆ ಉತ್ತಮ ಹಿಡಿತ ಹೊಂದಿದ್ದ ಬಂದೇ ನವಾಜರು ತಮ್ಮ ಎಂಬತ್ತನೇ ವರ್ಷದಲ್ಲಿ ಗುಜರಾತ್ ಮಹಾರಾಷ್ಟ್ರದ ಮೂಲಕ ಗುಲ್ಬರ್ಗಾ ತಲುಪುವ ದಾರಿಯಲ್ಲಿ ಸಿಗುವ ಜನಸಾಮಾನ್ಯರೊಂದಿಗೆ ಬೆರೆತು ಅವರ ಆಡು ಭಾಷೆಯಾದ ದಖ್ಖನಿ ಉರ್ದು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಆ ಭಾಷೆಯ ಪ್ರಥಮ ಗದ್ಯ ಲೇಖಕರು ಹಾಗೂ ಕವಿಗಳು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಬಂದೇ ನವಾಝರು ಉರ್ದು ಭಾಷೆಯಲ್ಲಿ ಬಿಡಿಗವನಗಳು, ಗಝಲ್, ರುಬಾಯಿಗಳನ್ನು ಬರೆದಿರುವರು. ಸರಳ ಉಪಮೆಗಳ ಪ್ರಮೇಯದಿಂದ ರುಬಾಯಿಗೆ ರಂಗು ನೀಡಿ ಬರೆದಿರುವುದು ವಿಶೇಷ
“ಪಾನಿ ಮೆ ನಮಕ್ ಡಾಲ್ ಮಜಾ ದೇಖ್ತಾ ದಿಸೇ
ಜಬ್ ಘುಲ್ಗಯಾ ನಮಕ್ ತೋ ನಮಕ್ ಬೋಲ್ನಾ ಕಿಸೇ,
ಯೂಂ ಖೋಯಿ ಖುದಿ ಅಪ್ನಿ ಖುದಾ ಸಾತ್ ಮಹ್ಮದ್,
ಆಬ್ ಘಲ್ ಗಯಿ ಖುದಿ ತೋ ಖುದಾಬನ್ ನಾಕೋಯಿ ದಸೇ.”
ಈ ರುಬಾಯಿಯಲ್ಲಿ ರಹಸ್ಯ ದೈವಿಸತ್ಯವನ್ನು ಹೀಗೆ ವಿವರಿಸುತ್ತಾರೆ
“ನೀರಿನಲ್ಲಿ ಉಪ್ಪನ್ನು ಹಾಕಿ ಅದನ್ನು ನೋಡಿದರೆ, ಉಪ್ಪು ನೀರಿನಲ್ಲಿ ಕರಗುತ್ತದೆ. ಈಗ ಉಪ್ಪಿನ ಅಸ್ತಿತ್ವ ಎಲ್ಲಿ ಹೋಯಿತು. ಅದೇ ರೀತಿ ದೈವಭಕ್ತನು ತನ್ನ ‘ಅಹಂ’ ಅನ್ನು ದೇವರ ಪ್ರಭೆಯಲ್ಲಿ ವಿಲೀನಗೊಳಿಸಿದಾಗ, ನಾವು ಯಾರನ್ನು ದೇವರೆಂದು ಕರೆಯಬೇಕು.”
ಇವುಗಳಲ್ಲದೆ ಪ್ರಸಿದ್ಧವಾದ ‘ಚಕ್ಕಿ ನಾಮ’ಗಳ ತುರ್ಜಮೆಗಳು ಕೂಡಾ ಇವೆ. ಇದರ ಒಂದು ಪ್ರತಿಯು ಹೈದರಾಬಾದಿನಲ್ಲಿ ಇಂದಿಗೂ ಕಾಣಲು ಸಾಧ್ಯ. ಗ್ರಾಮೀಣ ಮಹಿಳೆಯರು ಜೋಳ, ಗೋಧಿಯನ್ನು ಬೀಸುಗಲ್ಲಿನಲ್ಲಿ ಬೀಸುವಾಗ ಹಾಡುವ ಹಾಡುಗಳಾಗಿದೆ ಚಕ್ಕೀನಾಮ.
ದ್ವಿಪದಿಯಲ್ಲಿಯೂ ಸಹ ಹಲವು ಕವಿತಿಗಳನ್ನ ಖ್ವಾಜಾರವರು ಹಣೆದಿರುವರು. ಪ್ರೇಮ ವೃತ್ತಾಂತಗಳ ಕುರಿತು, ಪ್ರೇಮ ಅಸ್ತಿತ್ವಗಳ ಕುರಿತು ಕಟ್ಟಿದ ಕವನಗಳಂತೂ ಅದ್ಭುತ.
ಬಂದೇ ನವಾಝರ ತಾತ್ವಿಕತೆ ಮತ್ತು ಬರವಣಿಗೆಯ ಮಹತ್ವವನ್ನು ವಿವರಿಸುವ ಕನ್ನಡದ ಮೊದಲ ಪ್ರಮುಖ ಗ್ರಂಥ ಇದಾಗಿದೆ. ಅದೇ ಕಾರಣಕ್ಕಾಗಿ ಇದಕ್ಕೊಂದು ಸಾಹಿತ್ಯಕ-ಸಾಂಸ್ಕೃತಿಕ ಮಹತ್ವದ ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯು ಇದೆ. ಕನ್ನಡಿಗರಿಗೆ ಬಂದೇ ನವಾಝರನ್ನು ಪರಿಚಯಿಸಿದ ಲೇಖಕರಿಗೆ ಅನಂತ ಧನ್ಯವಾದಗಳು.
-ಸಲೀಂ ಇರುವಂಬಳ್ಳ
ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.
Poli 🔥
Thanks for your Information about Qwaja Mohammed Banda Nawaz R.A