“The Calligraphic State: Textual Domination and History in a Muslim Society” ಬಹಳ ಆಪ್ತ ಎನಿಸಿದ ಈ ಕೃತಿಯನ್ನು ಮೊದಲ ಬಾರಿ ನೋಡಿದ್ದು ಎರಡು ಸಾವಿರದ ಐದು-ಆರು ಇಸವಿಗಳಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಸ್ಟಡೀಸ್ ಆಫ್ ಕಲ್ಚರ್ ಆಂಡ್ ಸೊಸೈಟಿಯಲ್ಲಿ ಇಂಟರ್ನ್ ಆಗಿದ್ದಾಗ. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಬ್ರಿಂಕ್ಲಿ ಮೆಸಿಕ್ ಈ ಪುಸ್ತಕದ ಕರ್ತೃ. ಈ ಗ್ರಂಥಕರ್ತರನ್ನು ಮೊದಲ ಬಾರಿ ಕೇಳಿದ್ದು ಈ ಪುಸ್ತಕದ ಮೂಲಕವೆ. ಮಾಧ್ಯಮ ಅಧ್ಯಯನ ವಿಭಾಗದ ವಿದ್ಯಾರ್ಥಿಯಾದ ನನಗೆ ಇಂತಹ ಮಾನವಶಾಸ್ತ್ರೀಯ ಅಧ್ಯಯನಗಳನ್ನು ನಿಕಟವಾಗಿ ಅನುಸಂಧಾನ ಮಾಡಬೇಕಾದ ಯಾವುದೇ ಅಗತ್ಯವಿರಲಿಲ್ಲ. ಭಾರತದಲ್ಲಿನ ಮೀಡಿಯಾ ಸ್ಟಡೀಸ್ ಕ್ಷೇತ್ರದ ಸಂಪ್ರದಾಯ ಕೂಡಾ ಇಂತಹ ಅನುಸಂಧಾನಗಳಿಗೆ ಪ್ರೇರಕವಾಗಿರಲಿಲ್ಲ.
ನನ್ನನ್ನು ಆ ಪುಸ್ತಕದ ಕಡೆಗೆ ಆಕರ್ಷಿಸಿದ್ದು ಅದರ ಶೀರ್ಷಿಕೆಯಲ್ಲಿದ್ದ ‘ಕ್ಯಾಲಿಗ್ರಾಫಿಕ್ ಸ್ಟೇಟ್’ ಎನ್ನುವ ಪದಪುಂಜ. ಯಮನ್ ಮುಸ್ಲಿಮರ ನಡುವೆ ಚಾಲ್ತಿಯಲ್ಲಿದ್ದ ಬರಹ ಸಂಪ್ರದಾಯಗಳು, ಅವುಗಳ ವಿಕಾಸ, ಕೈಬರಹದಿಂದ ಮುದ್ರಣಕ್ಕೆ ಆದ ಬದಲಾವಣೆ, ಆ ಬದಲಾವಣೆಯ ಮಧ್ಯೆ ನಡೆದ ಮುಂದುವರಿಕೆ-ಸ್ಥಗಿತತೆಗಳ ಪಾತಳಿಯಲ್ಲಿ ಬರಹ ಮತ್ತು ಅಧಿಕಾರದ ನಡುವೆ ಇದ್ದ ಸಂಬಂಧ ಮತ್ತು ಆ ಸಂಬಂಧಗಳ ಮೂಲಕ ಯಮನ್ ಎನ್ನುವ ನಾಡಿನ ಇತಿಹಾಸ ಹಾಗೂ ವರ್ತಮಾನ ‘ಕ್ಯಾಲಿಗ್ರಾಫಿಕ್ ಸ್ಟೇಟ್’ ಕೃತಿಯಲ್ಲಿ ಪ್ರತಿಪಾದನೆಗೊಂಡಿರುವ ವಿಚಾರಗಳು.
ಕಾನೂನು ಸಂಹಿತೆಗಳ ಬಗೆಗಿನ ಜ್ಞಾನ, ಸಾಕ್ಷರತೆ, ಬರಹ ಹಾಗೂ ಅವುಗಳ ಸುತ್ತಮುತ್ತ ಹೆಣೆಯಲಾಗಿರುವ ಸ್ಥಳೀಯ ಆಚಾರಗಳು ಮುಸ್ಲಿಮ್ ಸಮೂಹಗಳಲ್ಲಿ ಸಂಕೀರ್ಣವಾದ ರಾಷ್ಟ್ರವ್ಯವಸ್ಥೆಯೊಂದನ್ನು ಹೇಗೆ ಉಳಿಸಿಕೊಂಡು ಬಂದಿದೆ ಎನ್ನುವ ಜಿಜ್ಞಾಸೆ ಮೆಸಿಕ್ ಕೃತಿಯ ಜೀವಾಳ. ಮುಸ್ಲಿಮ್ ಜನಾಂಗಗಳನ್ನು ಅರ್ಥೈಸುವಲ್ಲಿ ಇಂತಹ ಅಂಶಗಳು ಪ್ರಾಮುಖ್ಯತೆ ಪಡೆಯುತ್ತವೆ ಎನ್ನುವ ಗ್ರಹಿಕೆಗೆ ಅಡಿಗೆರೆ ಎಳೆಯುವ ಈ ಕೃತಿ ಮಾನವಶಾಸ್ತ್ರ, ಇಸ್ಲಾಮಿಕ್ ಸ್ಟಡೀಸ್ ಹಾಗೂ ಪಶ್ಚಿಮೇಷ್ಯ ಅಧ್ಯಯನ ವಿಭಾಗಗಳ ವಿಧಾನಗಳಲ್ಲಿ ಮಹಾತಿರುವುಗಳಿಗೆ ಕಾರಣವಾದ ಗ್ರಂಥ ಎಂದು ಅಭಿಪ್ರಾಯಿಸಲಾಗಿದೆ. ಮುಸ್ಲಿಮ್ ಜನಾಂಗಗಳನ್ನು textual polity ಯಾಗಿ ನೋಡಬೇಕಾದ ಸಾಧ್ಯತೆಗಳೆ ಈ ಕೃತಿಯ ಸಾರ.
ಈ ಟೆಕ್ಸ್ಚುವಲ್ ಪೊಲಿಟಿಯನ್ನು ಸಾಂಪ್ರದಾಯಿಕ ಮಾಧ್ಯಮ ಅಧ್ಯಯನ ಕ್ಷೇತ್ರದೊಂದಿಗೆ ಜೋಡಿಸುವ ಯಾವುದೇ ಸೂಚನೆಗಳು ಮೆಸಿಕ್ ಕೃತಿಯಲ್ಲಿ ಇರಲಿಲ್ಲ. ಅದಾಗ್ಯೂ, ಮೆಸ್ಸಿಕ್ ಪುಸ್ತಕದಿಂದ ಇಂತಹ ಒಂದು ಎಳೆಯನ್ನು ಹೊರತರಲು ಸಾಧ್ಯವಾಗಿದ್ದು ಕಳೆದ ವಾರ ನಮ್ಮನ್ನಗಲಿದ ಲಕ್ಷದ್ವೀಪ ನಿವಾಸಿಯಾದ ಹಿರಿಯ ವಿದ್ವಾಂಸ ಅಬೂಬಕರ್ ಕಾಮಿಲ್ ಸಖಾಫಿ ಅಗತ್ತಿ ಉಸ್ತಾದರ ಬೌದ್ಧಿಕ ಜೀವನವನ್ನು ನೋಡಿದಾಗ. ಮುಸ್ಲಿಮ್ ಜನಾಂಗಗಳಲ್ಲಿ ಕಂಡು ಬರುವ ವಿಸ್ತೃತವಾದ ಮಾಧ್ಯಮ ಸಂಸ್ಕೃತಿ (media culture) ಹಾಗೂ ಮಾಧ್ಯಸ್ಥತೆಯನ್ನು (mediation) ಇತಿಹಾಸಕ್ಕೆ ಸೇರ್ಪಡೆಗೊಳಿಸಲು ಈ ಮೂಲಕ ನನಗೆ ಸಾಧ್ಯವಾಯಿತು.
ಸಂಶೋಧನೆಯ ವೇಳೆ ಕೆಲವು ಗ್ರಂಥಗಳನ್ನು ಹುಡುಕಾಡಿಕೊಂಡು ಅವರು ಕೆಲಸ ಮಾಡುತ್ತಿದ್ದ ಮಅದಿನ್ ಸಂಸ್ಥೆಗೆ ಹೋಗಿದ್ದೆ. ಆಗ ಅವರು ಗದ್ದೆ ಬದಿಯ ಸಣ್ಣ ಮಸೀದಿಯ ಎರಡನೆಯ ಮಹಡಿಯಲ್ಲಿ ಗ್ರಂಥಗಳು ತುಂಬಿದ್ದ ಕೊಠಡಿಯೊಂದರಲ್ಲಿ ಕುಳಿತಿದ್ದರು. ಈ ದೃಶ್ಯವನ್ನು ನೋಡಿದಾಗ ಮೆಸಿಕ್ ಬರೆದಿರುವ ಯಮನ್ ಬಗೆಗಿನ ಮಾನವಶಾಸ್ತ್ರೀಯ ವಿವರಣೆಗಳು ಮನಸ್ಸಲ್ಲಿ ತೇಲಿ ಬಂತು. ಜತೆಗೆ ನನ್ನ ಅಧ್ಯಾಪಕ ಹಾಗೂ ಗ್ರಂಥೇತಿಹಾಸ ಕ್ಷೇತ್ರದ ಹಿರಿಯ ಸಂಶೋಧಕರಾದ ಪ್ರೊಫೆಸರ್ ಕಾರ್ನಾರ್ಡ್ ಹಿಷ್‌ಲರ್‌ರವರ ಡಮಸ್ಕಸ್ ಬಗೆಗಿನ ಐತಿಹಾಸಿಕ ವಿವರಣೆಗಳು ಕೂಡಾ ನೆನಪಿಗೆ ಬಂತು.
ವಿಶಾಲವಾದ ಆ ಕೊಠಡಿಯ ಒಂದು ಮೂಲೆಯಲ್ಲಿ ನಾಲ್ಕೈದು ವಿದ್ಯಾರ್ಥಿಗಳು ವೃತ್ತಾಕೃತಿಯಲ್ಲಿ ಕೂತು ಗ್ರಂಥಗಳನ್ನು ಓದುತ್ತಾ ಇದ್ದಾರೆ. ನಡುನಡುವೆ ಪರಸ್ಪರ ಓದಲು ಸಹಾಯ ಮಾಡುತ್ತಲೂ ಇದ್ದಾರೆ. ಮತ್ತೊಂದು ಬದಿಯಲ್ಲಿ ಕೂತಿರುವ ಕೆಲವು ವಿದ್ಯಾರ್ಥಿಗಳು ಕೊಠಡಿಯಾದ್ಯಂತ ಪ್ರಾಚೀನತೆಯ ಘಮವನ್ನು ಪಸರಿಸುತ್ತಿದ್ದ ಕೈಬರಹದ ಪ್ರತಿಗಳ ಕಟ್ಟನ್ನು ಹುಡುಕಾಡುತ್ತಿದ್ದಾರೆ. ಸಮೀಪದಲ್ಲಿರುವ ಮತ್ತೊಬ್ಬರು ಕೈಬರಹದ ಒಂದು ಪ್ರತಿಯನ್ನು ಸ್ವಲ್ಪ ಮೇಲಕ್ಕಿಟ್ಟು ಅದರಲ್ಲಿರುವ ಅಕ್ಷರಗಳನ್ನು ಟೈಪ್ ಮಾಡುತ್ತಾ ಇದ್ದಾರೆ. ಕೊಠಡಿಯ ಮತ್ತೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಮುಗಿಸಿ ಹಾಳೆಗಳನ್ನು ಒಂದೊಂದಾಗಿ ತಿರುವಿ ಹಾಕುತ್ತಾ ಇದ್ದಾರೆ. ಝೆರಾಕ್ಸ್ ತೆಗೆಯಲು ಹಾಗೂ ಪ್ರಿಂಟಿಂಗ್ ಪೂರ್ಣಗೊಂಡಿರುವ A4 ಹಾಳೆಗಳನ್ನು ಜೋಡಿಸಿಡಲು ಇಬ್ಬರು ಕಾಯುತ್ತಾ ಇದ್ದಾರೆ. ಮತ್ತೊಂದು ವಿದ್ಯಾರ್ಥಿ ಏಕಾಗ್ರತೆಯೊಂದಿಗೆ ಜಿಲ್ದ್ (ಮಸೀದಿಗಳನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ ಬುಕ್ ಬೈಂಡಿಂಗ್ ವಿಧಾನ) ಕಟ್ಟುತ್ತಾ ಇದ್ದಾರೆ. ಏತನ್ಮಧ್ಯೆ, ತನ್ನ ಮುಂದಿರುವ ಕಂಪ್ಯೂಟರಿನ ದೊಡ್ಡ ಸ್ಕ್ರೀನಲ್ಲಿ ಫೋಲ್ಡರುಗಳನ್ನು ತೆರೆಯುತ್ತಾ ಮುಚ್ಚುತ್ತಾ ಕೂತಿದ್ದಾರೆ ಅಬೂಬಕರ್ ಸಖಾಫಿ ಎಂಬ ಅಗತ್ತಿ ಉಸ್ತಾದ್. ಕೊಠಡಿಯಲ್ಲಿರುವ ಅಲ್ಮೇರಾಗಳಲ್ಲಿ ತುಂಬಿ ತುಳುಕುತ್ತಿರುವ ಗ್ರಂಥಗಳನ್ನು ಪರಾಂಬರಿಸುತ್ತಿರುವ ಬೇರೆ ಜನರೂ ಅಲ್ಲಿದ್ದಾರೆ.
ಇಷ್ಟೊಂದು ಜನರು ತುಂಬಿರುವ, ಇಷ್ಟೊಂದು ಕೆಲಸಗಳು ನಡೆಯುತ್ತಿರುವ ಆ ಕೊಠಡಿಯಲ್ಲಿ ಮೌಸ್ ಕ್ಲಿಕ್ಕುಗಳ, ಪ್ರಿಂಟರ್ ಹಾಗೂ ಸ್ಕ್ಯಾನಿಂಗ್ ಮೆಷಿನ್‌ಗಳಿಂದ ಬರುವ ಶಬ್ದಗಳನ್ನು ಬಿಟ್ಟರೆ ನೀರವ ಮೌನ. ನಾನು ಅಲ್ಲಿಗೆ ತಲುಪಿದ್ದು ಜಗದ್ವಿಖ್ಯಾತಿ ಪಡೆದ ಕೇರಳದ ಪ್ರಥಮ ಗ್ರಂಥವಾದ ಫತ್ಹುಲ್ ಮುಈನಿನ ಹಳೆಯ ಪ್ರತಿಗಳನ್ನು ಹುಡುಕಿಕೊಂಡು. ತನ್ನ ಡೆಸ್ಕ್ ಟಾಪಲ್ಲಿರುವ ಫೋಲ್ಡರನ್ನು ತೆರೆದು ಲಭ್ಯವಿರುವ ಹಳೆಯ ಹಸ್ತ ಪ್ರತಿಗಳನ್ನು ಕೂಡಾ ಒಳಗೊಂಡ 25 ಪ್ರತಿಗಳನ್ನು ಹಿಂದೆ ಮುಂದೆ ನೋಡದೆ ನನ್ನ ಪೆನ್ಡ್ರೈವ್‌ಗೆ ಕಾಪಿ ಮಾಡಿ ಕೊಟ್ಟರು ಅಗತ್ತಿ ಉಸ್ತಾದ್. ಈಜಿಪ್ಟ್‌ನಿಂದ ಇಂಡೋನೇಷ್ಯಾ ವರೆಗಿನ ವಿವಿಧ ಸ್ಥಳಗಳಿಂದ ವಿವಿಧ ಕಾಲಗಳಲ್ಲಿ ಪ್ರಕಟಗೊಂಡ ಹಸ್ತ ಪ್ರತಿಗಳು ಹಾಗೂ ಮುದ್ರಿತ ಪ್ರತಿಗಳು ಆ ಪೈಕಿ ಇದ್ದವು. ವರ್ಷಗಳ ಕಾಲದ ಪ್ರಯತ್ನದಿಂದ ಮಾತ್ರ ದೊರೆಯಬಹುದಾದ ಬೃಹತ್ ಜ್ಞಾನ ಭಂಡಾರವನ್ನು ಒಂದೇ ಕ್ಲಿಕ್ಕಿನಲ್ಲಿ ಅವರು ನನಗೆ ನಕಲು ಮಾಡಿ ಕೊಟ್ಟರು! ಅದಾಗ್ಯೂ, ಅಗತ್ಯವಾದದ್ದು ದೊರಕಿದಾಗ ಉಂಟಾಗುವ ಸಂತೋಷಕ್ಕಿಂತ ಕೊಠಡಿಯಲ್ಲಿ ನಡೆಯುತ್ತಿರುವ ವೈವಿಧ್ಯಮಯ ಚಟುವಟಿಕೆಗಳಿಂದ ಉಂಟಾದ ಆಶ್ಚರ್ಯವೆ ನನ್ನನ್ನು ಬರ ಸೆಳೆದಿತ್ತು.
ಆದರೆ ಅಲ್ಲಿದ್ದ ಜನರಿಗೆ ಇದರಲ್ಲೇನೂ ಹೊಸತನ ಇರಲಿಲ್ಲ. ಅವರಿಗೆ ಇದು ವರ್ಷಪೂರ್ತಿ ದಿನದ ಮೂರರಲ್ಲೊಂದು ಭಾಗ ನಡೆಯುತ್ತಾ ಬಂದಿರುವ ದೈನಂದಿನ ಚಟುವಟಿಕೆಯಷ್ಟೇ. ಇತಿಹಾಸದ ಬಗ್ಗೆ ಅದರಲ್ಲೂ ವಿಶೇಷವಾಗಿ ಹಿಂದೂ ಮಹಾಸಮುದ್ರದ ತೀರ ಪ್ರದೇಶಗಳ ಇತಿಹಾಸದ ಬಗ್ಗೆ ಅಗಾಧವಾದ ಜ್ಞಾನ ಅಗತ್ತಿ ಉಸ್ತಾದರಿಗಿತ್ತು. ಅವರ ಈ ಜ್ಞಾನವನ್ನು ತಮ್ಮ ಸಂಶೋಧನೆಗಳಿಗಾಗಿ ಸದುಪಯೋಗಪಡಿಸಲು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಲಪ್ಪುರಂ ಜಿಲ್ಲೆಯ ಕುಗ್ರಾಮವಾದ ಮೇಲ್ಮುರಿಗೆ ಹೋಗಿರುವ ಎಲ್ಲಾ ಸಂಶೋಧಕರಿಗೂ, ವಿದ್ಯಾರ್ಥಿಗಳಿಗೂ ಇಂಥದೇ ಅನುಭವಗಳಿವೆ.
‘Most bookish society’, ಮಧ್ಯಕಾಲದ ಮುಸ್ಲಿಂ ಜನಾಂಗಗಳನ್ನು ಪ್ರೊಫೆಸರ್ ಹಿಷ್‌ಲರ್ ವರ್ಣಿಸುವುದು ಹೀಗೆ. ಅಗತ್ತಿ ಉಸ್ತಾದರ ಜೀವನ ಈ ಪದಪುಂಜ ಜೀವತೆತ್ತು ಬಂದಿರುವ ಹಾಗಿದೆ. ಚರಿತ್ರೆ ಹಾಗೂ ವರ್ತಮಾನದಲ್ಲಿ ಗ್ರಂಥಗಳನ್ನು ಹುಡುಕಾಡಲು ಮತ್ತು ಅವುಗಳನ್ನು ಇತರರಿಗೆ ಲಭ್ಯಗೊಳಿಸಲು ಕಠಿಣ ಪ್ರಯತ್ನವನ್ನೇ ಅವರು ಮಾಡುತ್ತಿದ್ದರು.
ಹೊಸತಾಗಿ ಒಂದು ಪುಸ್ತಕ ಯಾ ಹಸ್ತ ಪ್ರತಿ ಸಿಕ್ಕಿದರೆ ಅಥವಾ ಸಿಗಬಹುದೆಂದು ತಿಳಿದರೆ ಅವರಿಗಾಗುತ್ತಿದ್ದ ಆನಂದವನ್ನು ಜೊತೆಗಿರುವವರಿಗೂ ಕರೆದು ತಿಳಿಸುತ್ತಿದ್ದರು. ಯಾವತ್ತೋ ಬಂದಿದ್ದ ಸಂಶೋಧಕರನ್ನು ಕೂಡಾ ಕರೆದು ಸೂಚನೆ ನೀಡುತ್ತಿದ್ದರು. ಅವರು ಕೇಳದಿದ್ದರೂ ಅದನ್ನು ಸ್ಕ್ಯಾನ್ ಮಾಡಿ ಕಳುಹಿಸಿಕೊಡುತ್ತಿದ್ದರು. ಜ್ಞಾನವನ್ನು ಹಾಗೂ ಜ್ಞಾನದ ಮೂಲವನ್ನು ಇತರರಿಂದ ಬಚ್ಚಿಡಲು ಅವರಿಗೆ ಭಯವಾಗುತ್ತಿತ್ತು.
ಕಲಿಯಲು ಹಾಗೂ ನಕಲು ಮಾಡಲು ಯಾವ ವಿದ್ಯಾರ್ಥಿಯ ಬಳಿಗೆ ತೆರಳಲೂ ಅವರು ಹೇಸುತ್ತಿರಲಿಲ್ಲ. ಮಧ್ಯಯುಗದಲ್ಲಿ ಮಲಬಾರ್ ತೀರಕ್ಕೆ ತಲುಪುತ್ತಿದ್ದ ಅಪೂರ್ವ ಗ್ರಂಥಗಳನ್ನು ಸ್ವಾಗತಿಸಲು ಕ್ಯಾಲಿಕಟ್ ಸಮುದ್ರ ತೀರದಲ್ಲಿ ಹಬ್ಬಕ್ಕೆ ಸಮಾನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತೆನ್ನುವ ವಿಚಾರವನ್ನು ಕುಟ್ಟಿಚ್ಚಿರದಲ್ಲಿ ನಡೆದ ಸೆಮಿನಾರಿನಲ್ಲಿ ಒಮ್ಮೆ ಉಲ್ಲೇಖಿಸಿದ್ದೆ. ಕೊನೆಯದಾಗಿ ಅವರು ನನ್ನನ್ನು ಸಂಪರ್ಕಿಸಿದ್ದು ಆ ಬಗೆಗಿನ ವಿವರಗಳನ್ನು ಪಡೆಯಲೋಸುಗ. ಅಪೂರ್ವ ಆಕರಗಳನ್ನು ಹುಡುಕಾಡಿಕೊಂಡು ಬರುವವರು ತೋರುವ ಅಪ್ಯಾಯಮಾನತೆಯನ್ನು ತನ್ನ ಸ್ನೇಹ ಹಾಗೂ ಉದಾರತೆಯಿಂದ ಮಂಕಾಗಿಸುತ್ತಿದ್ದರು ಅಬೂಬಕರ್ ಸಖಾಫಿ ಅಗತ್ತಿ. ಅಧ್ಯಯನ ಸಂಶೋಧನೆಗಳ ಔಪಚಾರಿಕತೆಯಾಚೆಗೆ ಆ ಸಂಬಂಧ ಬೆಳೆಯುತ್ತಿತ್ತು.
ಮಲಬಾರಿನ ಹಾಗೂ ಮಲಬಾರ್ ಬಗೆಗಿನ ಬೌದ್ಧಿಕ ಅನುಸಂಧಾನಗಳಲ್ಲಿ ಜ್ಞಾನ ಶಾಸ್ತ್ರೀಯ ಸ್ಥಗಿತತೆಗಳು ಕಳೆದೆರಡು ದಶಕಗಳಲ್ಲಿ ಘಟಿಸಿದೆ. ಭಾರತದ ಹಾಗೂ ವಿದೇಶದ ಪ್ರಮುಖ ವಿಶ್ವವಿದ್ಯಾನಿಲಯ ಹಾಗೂ ಅಧ್ಯಯನ ಕೇಂದ್ರಗಳಿಗೆ ಕೇರಳದಿಂದ ತಲುಪಿದ ಸಂಶೋಧನಾರ್ಥಿಗಳ ಸಂಶೋಧನೆಗಳೆ ಈ ಸ್ಥಗಿತತೆಗೆ ಕಾರಣ. ಈ ಸ್ಥಗಿತತೆಯ ವಿಧಾನ, ಆಕರ ಹಾಗೂ ದತ್ತಾಂಶಕ್ಕೆ ಸಂಬಂಧಪಟ್ಟ ಮೂಲಭೂತ ಸ್ವಭಾವವನ್ನು ನಿರ್ಧರಿಸುವಲ್ಲಿ ಅಬೂಬಕರ್ ಸಖಾಫಿಯವರ ಗ್ರಂಥ ಭಂಡಾರ ಹಾಗೂ ಅವುಗಳನ್ನು ಗ್ರಹಿಸುವಲ್ಲಿ ಅವರಿಗಿದ್ದ ಪ್ರಾವೀಣ್ಯತೆ ಮಹತ್ತರ ಪಾತ್ರವನ್ನು ವಹಿಸಿದೆ. ಆ ನಿಟ್ಟಿನಲ್ಲಿ ನೋಡಿದರೆ ಕಳೆದ ಒಂದುವರೆ ದಶಕದಲ್ಲಿ ಬೆಳೆದು ಬಂದಿರುವ ಮಲಬಾರ್ ಸ್ಟಡೀಸ್ ಎನ್ನುವ ಇಡೀ ಅಧ್ಯಯನ ಶಿಸ್ತಿನ ಪ್ರಧಾನ ಆಧಾರ ಶಿಲೆಗಳಲ್ಲೊಂದು ಅಬೂಬಕರ್ ಸಖಾಫಿ ಹಾಗೂ ಅವರ ಅಧ್ಯಯನ ತೃಷೆ ಎನ್ನಬಹುದು. ಈ ಕಾಲಾವಧಿಯಲ್ಲಿ ಭಾರತದ ಒಳಗಿಂದ ಹಾಗೂ ಹೊರಗಿನಿಂದ ಬಂದಿರುವ ಮಲಬಾರ್ ಸಂಬಂಧಿತ ಸಂಶೋಧನೆಗಳ ಅಕ್ನಾಲೆಜ್ಮೆಂಟ್ ಪುಟಗಳ ಮೂಲಕ ಹಾದು ಹೋದರೆ ಈ ವಿಚಾರವನ್ನು ಮನಗಾಣಬಹುದು.
ಲಕ್ಷದ್ವೀಪದಲ್ಲಿ ಜನಿಸಿದ ವ್ಯಕ್ತಿಯೆಂಬ ನೆಲೆಯಲ್ಲಿ ಸಹಜವಾಗಿಯೇ ದೊರಕಿರುವ ಕೆಲವು ಪ್ರತಿಭೆಗಳು ಅಗತ್ತಿ ಉಸ್ತಾದರಿಗಿದೆ. ಭೂವಿಜ್ಞಾನ ಹಾಗೂ ಖಗೋಳವಿಜ್ಞಾದಲ್ಲಿ ಅಲಿ ಮಾಣಿಕ್‌ಫಾನರ ಹಾಗೆ ಉಸ್ತಾದರಿಗೆ ಅಗಾಧ ಪಾಂಡಿತ್ಯ ಇದೆ. ಈ ಕ್ಷೇತ್ರದಲ್ಲಿ ಹಲವಾರು ಅಧ್ಯಯನಗಳನ್ನು ಹಾಗೂ ಆಲೋಚನೆಗಳನ್ನು ಅವರು ಜಂಟಿಯಾಗಿ ನಡೆಸಿದ್ದಾರೆ. ಅವರು ಜನಜನಿತರಾಗಿರುವುದು ಕೂಡಾ ಈ ಕ್ಷೇತ್ರದಲ್ಲಿರುವ ಅವರ ವಿಶೇಷ ತಜ್ಞತೆಯಿಂದ. ದಿಕ್ಕುಗಳನ್ನು ನಿರ್ಣಯಿಸುವುದು, ನಮಾಝಿನ ಹಾಗೂ ಚಂದ್ರದರ್ಶನದ ಸಮಯ ನಿರ್ಣಯಿಸುವುದರಲ್ಲಿ ಅವರ ಸಾಮರ್ಥ್ಯ ವಿಶೇಷವಾಗಿತ್ತು. ಕೇರಳದ ಪ್ರಮುಖ ಕ್ಯಾಲೆಂಡರುಗಳು ಹಾಗೂ ಪತ್ರಿಕೆಗಳು ಈ ವಿಚಾರದಲ್ಲಿ ಅವರ ಲೆಕ್ಕಾಚಾರಗಳನ್ನು ಆಶ್ರಯಿಸುತ್ತಿತ್ತು. ಆದರೆ, ಇದಕ್ಕಿಂತಲೂ ವಿಸ್ತೃತವಾದ ಕಾರ್ಯಕ್ಷೇತ್ರವನ್ನು ಅವರು ಹೊಂದಿದ್ದರು ಎನ್ನುವುದನ್ನು ಕೂಡಾ ನಾವು ಗಮನಿಸಬೇಕಿದೆ. ಬೇರೆ ಬೇರೆ ಕಾಲದೇಶಗಳಲ್ಲಿ ಪ್ರಕಟವಾದ ಒಂದೇ ಪುಸ್ತಕದ ವಿವಿಧ ಹಸ್ತಪ್ರತಿಗಳ ಹುಡುಕಾಟ, ದೊರಕಿದ ಹಸ್ತಪ್ರತಿಗಳ ಆಧಾರದಲ್ಲಿ ಹೊಸ ಕ್ರಿಟಿಕಲ್ ಆವೃತ್ತಿಗಳ ಪ್ರಕಟಣೆ, ಹಳೆಯ ಗ್ರಂಥಗಳಿಗೆ ಟಿಪ್ಪಣಿಗಳನ್ನು ಸೇರಿಸಿ ನವೀಕರಿಸುವುದು ಇವೇ ಮುಂತಾದವು ಉಸ್ತಾದರ ಹವ್ಯಾಸಗಳು. ಹೀಗೆ ಸದಾ ಸಮಯ ಪುಸ್ತಕಗಳೊಂದಿಗೆ ಕಳೆಯುವುದು ಅವರಿಗೆ ಮುದ ನೀಡುತ್ತಿತ್ತು.
ಈ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಬೆಳವಣಿಗೆಯನ್ನು ಬಯಸಿ ಹಲವಾರು ಕೈಪಿಡಿಗಳನ್ನು ಕೂಡಾ ಅವರು ರಚಿಸಿದ್ದಾರೆ. ಈ ಪೈಕಿ ಅವರ ಇಂಗ್ಲಿಷ್-ಅರೇಬಿಕ್-ಮಲಯಾಳಂ ಕೈಪಿಡಿ ಗಮನಾರ್ಹ ಎನಿಸಿದೆ. ಕಂಪ್ಯೂಟರ್ ಟೈಪಿಂಗ್ ವ್ಯಾಪಕವಾಗುತ್ತಿದ್ದ ಕಾಲದಲ್ಲಿ ಟೈಪಿಂಗ್ ಕಲಿಯಲು ಬಹುತೇಕ ವಿದ್ಯಾರ್ಥಿಗಳು ಈ ಕೃತಿಯನ್ನು ಬಳಸಿಕೊಳ್ಳುತ್ತಿದ್ದರು. ಪುಸ್ತಕದ ವಸ್ತುವಿಗೆ ಪ್ರಾಮುಖ್ಯತೆ ಕೊಡುವ ಹಾಗೆ ಅದರ ವಿನ್ಯಾಸಕ್ಕೂ ಬಹಳ ಮಹತ್ವ ನೀಡುವುದು ಉಸ್ತಾದರ ಜಾಯಮಾನ. ಡಿಜಿಟೈಝೇಶನ್ ರಂಗದ ಆಧುನಿಕ ವ್ಯವಸ್ಥೆಗಳನ್ನು ಅರಿತು ಆರ್ಕೈವಿಂಗ್‌ಗಾಗಿ ಅದನ್ನು ಬಳಸುವಲ್ಲಿ ಕೂಡಾ ಅವರು ಮುಂಚೂಣಿಯಲ್ಲಿದ್ದರು.
ಹಳೆಯ ಗ್ರಂಥಗಳ ಹಾಶಿಯಗಳನ್ನು (ವಿವರಣಾ ಗ್ರಂಥ) ಒಳಗೊಂಡಂತೆ ನೂರರಷ್ಟು ಗ್ರಂಥಗಳನ್ನು ಅಗತ್ತಿ ಉಸ್ತಾದರು ರಚಿಸಿದ್ದಾರೆ. ಜತೆಗೆ ನೂರಾರು ಪುಸ್ತಕಗಳನ್ನು ಸಿದ್ಧಪಡಿಸಿಟ್ಟು ಉಸ್ತಾದರು ನಮ್ಮನ್ನಗಲಿದ್ದಾರೆ. ಪ್ರಿಂಟ್ ಮಾಡುವ ಬದಲು ಪುಸ್ತಕಗಳನ್ನು ಆನ್ಲೈನ್ ಓಪನ್ ಸೋರ್ಸಾಗಿ ಪ್ರಕಟಿಸುವ ಶೈಲಿ ಅವರು ಪಾಲಿಸುತ್ತಿದ್ದರು.
ಅರಬಿ ಮಲಯಾಳಂ ಭಾಷೆಯ ಆದಿಕಾಲದ ರಚನೆಗಳಲ್ಲೊಂದಾದ ‘ಮುಹ್ಯಿದ್ದೀನ್ ಮಾಲೆ’ಯ ಕಾವ್ಯಪುರುಷರಾಗಿದ್ದಾರೆ ಅಬ್ದುಲ್ ಖಾದಿರ್ ಜೀಲಾನಿ. ಅವರ ಜೀವನದ ಬಗ್ಗೆ ಅಲೆಗ್ಸಾಂಡ್ರಿಯನ್ ವಿದ್ವಾಂಸ ಇಮಾಮ್ ಇಬ್ನು ಹಜರಿಲ್ ಅಸ್ಖಲಾನಿ ರಚಿಸಿದ ‘ಜಿಬ್ತತು ನಾಳಿರ್ ಫೀ ತರ್ಜುಮತಿ ಶೈಖ್ ಅಬ್ದುಲ್ ಖಾದಿರ್’ ಕೃತಿಯ ಟಿಪ್ಪಣಿಯನ್ನು ಪೂರ್ಣಗೊಳಿಸಿ ಲೈಬ್ರರಿಯಿಂದ ಹೊರಬರುವಾಗ ಮರಣ ಅವರ ಬಾಗಿಲನ್ನು ತಟ್ಟಿತ್ತು. ಉಸ್ತಾದರಿಗೆ ಮುದ್ರಣ ಪೂರ್ವ ಕಾಲದ ಮಲಬಾರಿನ ಸಾಹಿತ್ಯ ಚರಿತ್ರೆಯ ಬಗ್ಗೆ ಕೂಡಾ ಅಪಾರವಾದ ಪಾಂಡಿತ್ಯವಿತ್ತು. ಮಲಬಾರ್ ತೀರದ ಮಕ್ತಬುಗಳ (ಮಸೀದಿಗಳೊಂದಿಗೆ ಹೊಂದಿಕೊಂಡಿರುವ ಲೈಬ್ರೆರಿಗಳು) ಬಗ್ಗೆ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ʼWriting cultures in the Malabar Coastʼ ಎನ್ನುವ ಸಂಶೋಧನಾ ಪ್ರಾಜೆಕ್ಟಿನ ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಿದ್ದರು ಅಗತ್ತಿ ಉಸ್ತಾದ್.
ಮಲಬಾರ್ ಮುಸ್ಲಿಮರ ಮಾಧ್ಯಮ ಸಂಸ್ಕೃತಿ ಎಂಬ ವಿಷಯದಲ್ಲಿ ಆರಂಭಗೊಂಡ ನನ್ನ ಸಂಶೋಧನೆ 2018ರಲ್ಲಿ ಪೂರ್ಣಗೊಳ್ಳುವಾಗ ಅದರ ಒತ್ತು ಬದಲಾಗಿ ಬೇರೆಯೇ ವಿಷಯವಾಗಿ ಮಾರ್ಪಟ್ಟಿತ್ತು. ಮಾಧ್ಯಮ ಸಂಸ್ಕೃತಿ ಎನ್ನುವುದನ್ನು ಮೀರಿ ತಾಂತ್ರಿಕತೆ ಹಾಗೂ ದೇವವಿಜ್ಞಾನ ಎನ್ನುವ ವಿಷಯದ ಕಡೆಗೆ ಅದು ಹೊರಳಿತ್ತು. ಮುಸ್ಲಿಮರಲ್ಲಿರುವ ಸಂವಹನ ವಿಧಾನಗಳನ್ನು ಇತಿಹಾಸಕ್ಕೆ ತರುವಲ್ಲಿ ಅಗತ್ತಿ ಉಸ್ತಾದಾರು ತೋರಿದ ಆಸ್ಥೆ ಹಾಗೂ ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಲಭ್ಯಗೊಳಿಸುವಲ್ಲಿ ಅವರು ವಹಿಸಿದ ಕಾಳಜಿ ಈ ಬದಲಾವಣೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. ಜತೆಗೆ ಮಾಧ್ಯಮ ಇತಿಹಾಸಜ್ಞರಾದ ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊಫೆಸರ್ ತಿರುಮಾಳ್ ಹಾಗೂ ಸಮಾಜ ವಿಜ್ಞಾನಿ ಸಜೇಶ್ ಹೆಗ್ಡೆ ಮುಂತಾದವರ ಮಾರ್ಗದರ್ಶನವೂ ಈ ವಿಕಾಸದ ಹಿಂದಿತ್ತು.
ನನ್ನ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸುವ ತುಸು ಮುಂಚೆ ಮೆಸ್ಸಿಕ್ ಅವರ ಹೊಸ ಗ್ರಂಥ Shariah Script: A Historical Anthropology ಕೂಡಾ ಹೊರಬಂತು. ಇಸ್ಲಾಮಿಕ್ ಕಾನೂನು ವ್ಯವಸ್ಥೆ ಯಮನ್ ಮುಸಲ್ಮಾನರ ನಡುವೆ ಒಂದು ಪ್ರಾದೇಶಿಕ ಜೀವನ ಸಂಸ್ಕೃತಿಯಾಗಿ ಹೇಗೆ ಉಳಿಯುತ್ತಾ ಬಂದಿದೆ ಎನ್ನುವುದನ್ನು ಈ ಕೃತಿ ಶೋಧಿಸಿದೆ. ವಸಾಹತುಶಾಹಿ, ಒಟ್ಟೊಮನ್, ರಾಷ್ಟ್ರೀಯವಾದಿ ಹಂತಗಳನ್ನೆಲ್ಲ ಅತಿಜಯಿಸಿದ ಈ ಜೀವನ ಸಂಸ್ಕೃತಿ ಶತಮಾನಗಳ ಕಾಲ ಉಳಿಯಲು ಕಾರಣ ಮುಸ್ಲಿಮರ ನಡುವೆ ಚಾಲ್ತಿಯಲ್ಲಿದ್ದ ಪುಸ್ತಕಗಳೊಂದಿಗೆ ಹಾಗೂ ಪುಸ್ತಕಗಳ ಮೂಲಕ ಇರುವಂತಹ ವಿಶೇಷ ಸಂಬಂಧಗಳಾಗಿವೆ ಎಂದು ಮೆಸ್ಸಿಕ್ ವಾದಿಸಿದ್ದಾರೆ. ಪಠ್ಯಕೇಂದ್ರಿತ ಪ್ರಾದೇಶಿಕ ಸಂಸ್ಕೃತಿ ಎನ್ನುವ ನೆಲೆಯಲ್ಲಿ ಇಸ್ಲಾಮಿನ ಕಾನೂನು ವ್ಯವಸ್ಥೆಯನ್ನು ಮೆಸ್ಸಿಕ್ ಗ್ರಹಿಸಿದ್ದಾರೆ. ಧಾರ್ಮಿಕ ವಿದ್ವಾಂಸರ ಫತ್ವಗಳು, ನ್ಯಾಯಾಲಯದ ತೀರ್ಪುಗಳು, ವ್ಯಕ್ತಿಗಳ ನಡುವಿನ ಒಪ್ಪಂದಗಳು ಮತ್ತು ಪಾಠ ಪುಸ್ತಕಗಳು ಕೂಡ ಸದರಿ ಪಠ್ಯಗಳಲ್ಲಿ ಒಳಗೊಳ್ಳುತ್ತದೆ. ಈ ಪಠ್ಯಗಳ ಓದುಗನಾಗಿ ಸಂಶೋಧನೆಗೆ ಇಳಿಯುವ ಮಾನವ ಶಾಸ್ತ್ರಜ್ಞನಿಗೆ ಸಿಗುವ ಒಳನೋಟಗಳು ಮೆಸಿಕ್ ರವರ ಈ ಹೊಸ ಗ್ರಂಥದ ವಿಧಾನಗಳನ್ನು ಗಮನಾರ್ಹಗೊಳಿಸುತ್ತದೆ.
ಮೆಸಿಕ್‌ರವರ ಬಹುತೇಕ ವಾದಗಳು ಲೈಬ್ರರಿಗಳು ಹಾಗೂ ಆರ್ಕೈವುಗಳು ಎಂಬ ವಿಂಗಡಣೆಯನ್ನು ತರುತ್ತವೆ. ಅವರು ತನ್ನ ಪ್ರಬಂಧವನ್ನು ಮಂಡಿಸಿದ ನಂತರ ಈ ಬಗೆಗಿನ ಪ್ರಶ್ನೆಯೊಂದನ್ನು ಸಭಿಕರು ಅವರತ್ತ ಎಸೆದಿದ್ದರು. ಆಗ ನನಗೆ ಆಗತ್ತಿ ಉಸ್ತಾದರ ಲೈಬ್ರರಿ ನೆನಪಿಗೆ ಬಂತು. ಅವರ ಲೈಬ್ರರಿಯಲ್ಲಿ ಇಂತಹ ವಿಂಗಡನೆ ಇರಲಿಲ್ಲ. ಹಸ್ತ ಪ್ರತಿಗಳನ್ನು ಭೂತಕಾಲಕ್ಕೆ ಕಳಿಸದೆ ಲೈಬ್ರರಿಯಲ್ಲಿ ಅಥವಾ ವರ್ತಮಾನದಲ್ಲೇ ಉಳಿಸುವ ಕೆಲಸವನ್ನು ಅವರು ಮಾಡಿದ್ದರು.
ದ್ವೀಪಗಳಿಗೆ ಭೌಗೋಳಿಕವಾಗಿ ಬರುವಂತಹ ಮುಕ್ತತೆ ದೀರ್ಘಕಾಲ ಕೇರಳದಲ್ಲಿ ಜೀವಿಸಿದ ಈ ಇತಿಹಾಸಜ್ಞನ ನಿಲುವುಗಳನ್ನು ನಿರ್ಧರಿಸುವಲ್ಲಿ ಹಾಗೂ ನಿಯಂತ್ರಿಸುವಲ್ಲಿ ಪಾತ್ರವಹಿಸಿದೆ. ಆ ಮುಕ್ತತೆಯ ಗಾಳಿ ಬೆಳಕುಗಳೆ ಅವರ ಅಧ್ಯಯನ-ಸಂಶೋಧನೆಗಳ ಹಿಮ್ಮತ್ತು ಎನ್ನಬಹುದು.
ಲೇಖಕ: ನುಐಮಾನ್ ಕೀಪ್ರತ್ ಅಂದ್ರು
ಕನ್ನಡಕ್ಕೆ: ನಝೀರ್ ಅಬ್ಬಾಸ್
ಡಾ. ನುಐಮಾನ್’ರವರು ಪ್ರಸ್ತುತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜರ್ಮನಿಯ ಫ್ರೈಬರ್ಗ್ ಯುನಿವರ್ಸಿಟಿಯಲ್ಲಿ ಸಂಶೋಧಕರಾಗಿದ್ದ ಇವರು ಮಲೇಷ್ಯಾದ ಕರ್ಟನ್ ವಿಶ್ವವಿದ್ಯಾಲಯದಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದಾರೆ. ವಿವಿಧ ರಾಷ್ಟ್ರಗಳ ವಿವಿಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.
ಕೃಪೆ: ಟ್ರೂಕಾಪಿ ಥಿಂಕ್